
ಕಾರ್ಕಳ, ಜ. 10: ಪರಶುರಾಮ ಥೀಮ್ ಪಾರ್ಕಿನ ಸ್ವಚ್ಚತಾ ಕಾರ್ಯ ನಡೆಸಲು ಹಾಗೂ ನಿರಂತರ ಒಂದು ತಿಂಗಳು ಕಾಲ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ನೀಡುವಂತೆ ನಾನು ಬರೆದ ಪತ್ರಕ್ಕೆ ಉಡುಪಿ ಜಿಲ್ಲಾಧಿಕಾರಿಗಳು ಸಕಾಲಿಕವಾಗಿ ಸ್ಪಂದಿಸಿ ಸ್ವಚ್ಚತಾ ಕಾರ್ಯ ಆರಂಭಿಸಿರುವುದು ಸ್ವಾಗತಾರ್ಹ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಪರಶುರಾಮ ಥೀಂ ಪಾರ್ಕ್ ಸ್ವಚ್ಚತೆ ಹಾಗೂ ಭದ್ರತೆ ವಿಚಾರದಲ್ಲಿ ಜ.10 ರೊಳಗಾಗಿ ಅನುಸರಣಾ ವರದಿ ನೀಡುವಂತೆ ಜಿಲ್ಲಾಡಳಿತ ನಿರ್ಮಿತಿ ಕೇಂದ್ರಕ್ಕೆ ಸೂಚಿಸುವ ಜೊತೆಗೆ ಸ್ವಚ್ಚತಾ ಕಾರ್ಯವನ್ನು ಇಲಾಖೆಯಿಂದಲೇ ನಿರ್ವಹಿಸುವಂತೆ ಆದೇಶಿಸಿದೆ. ಥೀಂ ಪಾರ್ಕ್ ವಿಚಾರದಲ್ಲಿ ನಮ್ಮ ಕಾಳಜಿ ಏನೆಂಬುದನ್ನು ಸರ್ಕಾರ ಕೊನೆಗೂ ಒಫ್ಪಿಕೊಂಡಂತಾಗಿದೆ ಎಂದಿದ್ದಾರೆ.
ಥೀಂ ಪಾರ್ಕ್ ಸ್ವಚ್ಚತೆಯ ಜತೆಗೆ ರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಇದರ ಜತೆಗೆ ತಿಂಗಳು ಪೂರ್ತಿ ಥೀಮ್ ಪಾರ್ಕ್ ನಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮೂಲಕ ಸಾಂಸ್ಕ್ರತಿಕ ಕಾರ್ಯಕ್ರಮ ಆಯೋಜಿಸಬೇಕು. ಇದು ಸಾಧ್ಯವಾಗದಿದ್ದರೆ ಕ್ಷೇತ್ರದ ಒಂದೊಂದು ಯುವಕ ಸಂಘಕ್ಕೆ ಒಂದೊಂದು ದಿನ ಈ ಜವಾಬ್ದಾರಿ ನೀಡುವಂತೆ ಆಗ್ರಹಿಸುತ್ತೇನೆ.
ಇದೆಲ್ಲದರ ಜತೆಗೆ ಮುಂದಿನ ವರ್ಷ 2027 ಕ್ಕೆ ಕಾರ್ಕಳದ ಬಾಹುಬಲಿ ಮೂರ್ತಿಗೆ ಮಹಾಮಸ್ತಾಭಿಷೇಕ ನಡೆಯುವ ಮುನ್ನ ಪರಶುರಾಮ ಥೀಂ ಪಾರ್ಕ್ ಯೋಜನೆ ಪೂರ್ಣಗೊಳ್ಳಬೇಕು.ಮಸ್ತಕಾಭಿಷೇಕಕ್ಕೆ ಬಂದವರು ಪರಶುರಾಮ ಥೀಂ ಪಾರ್ಕ್ ನ್ನೂ ನೋಡಿ ಹೋಗುವುದಕ್ಕೆ ಅವಕಾಶ ಸೃಷ್ಟಿಯಾಗಬೇಕು. ಜಿಲ್ಲಾಡಳಿತ ಈ ದಿಶೆಯಲ್ಲಿ ಕಾರ್ಯ ನಿರ್ವಹಿಸಲಿ ಎಂದು ಸುನಿಲ್ ಕುಮಾರ್ ಸಲಹೆ ನೀಡಿದ್ದಾರೆ.

.
.
