ಕಾರ್ಕಳ: ಈ ಬಾರಿಯ ದೀಪಾವಳಿಗೆ ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿಗಳು ಬಣ್ಣ ಬಣ್ಣದ ಹಾಗೂ ವಿವಿಧ ಆಕಾರಗಳೊಂದಿಗೆ ಮಣ್ಣಿನ ಹಣತೆಗಳನ್ನು ಸಿದ್ಧಗೊಳಿಸಿದ್ದು, ಶಾರದ ಪೂಜೆಯ ದಿನ ಶಾಲಾ ದಾನಿಗಳು ಹಾಗೂ ಹಿತೈಷಿಗಳು ಆದ ಕಾರ್ಕಳ ಕಮಲಾಕ್ಷ ಕಾಮತ್ ದೀಪ ಬೆಳಗಿಸಿ ಮಾರಾಟಕ್ಕೆ ಬಿಡುಗಡೆಗೊಳಿಸಿ ಮಾತನಾಡಿ, ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಇಂತಹ ಕಾರ್ಯಗಳು ಶ್ಲಾಘನೀಯ ಎಂದರು.
ಕಳೆದ 3 ವರ್ಷಗಳಿಂದ ಮಣ್ಣಿನ ಬಣ್ಣದ ಹಣತೆಗಳನ್ನು ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿಗಳು ತಯಾರಿಸುತ್ತಿದ್ದು ಕಳೆದ 2 ವರ್ಷವೂ ದೀಪಾವಳಿ ಹಬ್ಬ ಪ್ರಾರಂಭವಾಗುವ ಮೊದಲೇ ರಾಜ್ಯದ ಮೂಲೆ ಮೂಲೆಗಳಿಗೆ ಎಲ್ಲಾ ಹಣತೆಗಳು ಮಾರಾಟವಾಗಿರುವುದು ವಿಶೇಷ. ವಿದ್ಯಾರ್ಥಿಗಳು ಸ್ವಾವಲಂಬಿಯಾಗಿ ಬದುಕಲು ನಡೆಸುವ ಪ್ರಯತ್ನದಲ್ಲಿ ಇದೀಗ ಕೇವಲ ಹತ್ತು ರೂಪಾಯಿಂದ ಪ್ರಾರಂಭಗೊಳ್ಳುವ ಈ ಬಣ್ಣದ ಹಣತೆಗಳನ್ನು ಶಾಲೆಗೆ ಭೇಟಿ ನೀಡಿ ನಿಮ್ಮ ಆಯ್ಕೆಯ ಹಣತೆಗಳನ್ನು ಖರೀದಿಸಿ ಪ್ರೋತ್ಸಾಹಿಸುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ. ಗಣಪತಿ ಪೈ, ಕಾರ್ಯದರ್ಶಿ ರಘುನಾಥ್ ಶೆಟ್ಟಿ, ಕೋಶಾಧಿಕಾರಿ ವಿಜಯ್ ಕುಮಾರ್ ಅತಿಥಿ ಗಣ್ಯರು, ಶಾಲಾ ಹಿತೈಷಿಗಳು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9480531469, 7619255170 ಅನ್ನು ಸಂಪರ್ಕಿಸಲು ಕೋರಲಾಗಿದೆ.