Share this news

ಪುತ್ತೂರು: ಹನುಮಗಿರಿ ಮೇಳದ ಪ್ರಧಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರು ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆ (ಅಕ್ಟೋಬರ್ 20) ತೆರಳಿದ್ದ ಬಂಟ್ವಾಳ ಜಯರಾಮ ಆಚಾರ್ಯ ಅವರು ಇಂದು ಮುಂಜಾನೆ ಹೃದಯಾ ಘಾತದಿಂದ ನಿಧನರಾಗಿದ್ದಾರೆ. ತೆಂಕುತಿಟ್ಟಿನ ಯಕ್ಷರಂಗದಲ್ಲಿ 50 ದಶಕಗಳಿಗೂ ಹೆಚ್ಚು ಕಾಲ ಮಿಂಚಿದ್ದ ಜಯರಾಮ ಆಚಾರ್ಯ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ.

1957 ಅಕ್ಟೋಬರ್ 12ರಂದು ಬಂಟ್ವಾಳ ಗಣಪತಿ ಆಚಾರ್ಯ ಮತ್ತು ಭವಾನಿ ಅಮ್ಮನವರ ಪುತ್ರರಾಗಿ ಜನಿಸಿದ ಜಯರಾಮ ಆಚಾರ್ಯರು ಬಂಟ್ವಾಳ ಬೋರ್ಡ್ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ, ಬಳಿಕ ತಂದೆಯವರ ಪ್ರೇರಣೆಯಿಂದ ಯಕ್ಷಗಾನ ರಂಗದತ್ತ ಹೆಜ್ಜೆ ಹಾಕಿದರು.

ಅಮ್ಮಾಡಿ,ಸೊರ್ನಾಡು ಮೇಳಗಳಲ್ಲಿ ತಮ್ಮ ಆರಂಭದ ತಿರುಗಾಟ ನಡೆಸಿದ ಅವರು ಬಳಿಕ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ ಲಲಿತ ಕಲಾ ಕೇಂದ್ರಕ್ಕೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ಬಳಿಕ ಕಟೀಲು ಮೇಳದಲ್ಲಿ ನಾಲ್ಕು ವರ್ಷ ಪುತ್ತೂರು ಕದ್ರಿ ಕುಂಬಳೆ ಎಡನೀರು ಮೇಳಗಳಲ್ಲಿ ತಿರುಗಾಟ ನಡೆಸಿದರು. ಕಳೆದ ಹಲವು ವರ್ಷಗಳಿಂದ ಹನುಮಗಿರಿ ಮೇಳದ ಪ್ರಧಾನ ಹಾಸ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದ ಜಯರಾಮ ಆಚಾರ್ಯ ಅವರು ಇಂದು ವಿಧಿವಶರಾಗಿದ್ದು ಮೃತರು ಪತ್ನಿ ಮಕ್ಕಳು ಮತ್ತು ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *