ಬೆಂಗಳೂರು: ಕರ್ನಾಟಕ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಸರ್ಕಾರದ ವಿರುದ್ಧದ ಪ್ರತಿ ದೂರಿಗೂ ವಿವರಣೆಯನ್ನು ಕೇಳಿ ಥಾವರ್ ಚೆಂದ್ ಗೆಹಲೋತ್ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆಯುತ್ತಿದ್ದಾರೆ. ಇದೀಗ ರಾಜ್ಯಪಾಲರ ಪತ್ರ ಸಮರಕ್ಕೆ ಸಿದ್ದರಾಮಯ್ಯ ಪ್ರತ್ಯಸ್ತç ಹೂಡಿದ್ದು, ರಾಜ್ಯಪಾಲರ ಯಾವುದೇ ಪತ್ರಗಳಿಗೆ ಕಾರ್ಯದರ್ಶಿಗಳು ಉತ್ತರಿಸದಂತೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಇಂದು (ಸೆಪ್ಟೆಂಬರ್ 26) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರು ಯಾವುದೇ ಪತ್ರ ಬರೆದರೂ ಸಂಪುಟ ಗಮನಕ್ಕೆ ತರಲು ಸಿಎಸ್‌ಗೆ ಸೂಚನೆ ನೀಡಲಾಗಿದ್ದು, ನೇರವಾಗಿ ರಾಜ್ಯಪಾಲರಿಗೆ ಉತ್ತರಿಸದಂತೆ ನಿರ್ಣಯ ಮೂಲಕ ಮುಖ್ಯಕಾರ್ಯದರ್ಶಿಗೆ ತಿಳಿಸಲಾಗಿದೆ.
ನಿಯಮ ಪ್ರಕಾರ ಸರ್ಕಾರದ ಮುಖ್ಯಕಾರ್ಯದರ್ಶಿ ಸಂಪುಟದ ಗಮನಕ್ಕೆ ತರಬೇಕೆಂದು ನಿರ್ಣಯ ಅಂಗೀಕರಿಸಲಾಗಿದೆ. ಕಾರ್ಯದರ್ಶಿ ಬದಲು ಸಂಪುಟ ಮೂಲಕ ರಾಜ್ಯಪಾಲರ ಪತ್ರಗಳಿಗೆ ಸರ್ಕಾರದ ಉತ್ತರ ನೀಡಲು ನಿರ್ಧರಿಸಲಾಗಿದೆ. ಅಲ್ಲದೇ ಅಗತ್ಯವಿದ್ದರಷ್ಟೇ ಉತ್ತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಎಚ್‌ಕೆ ಪಾಟೀಲ್, ಸಂಪುಟ ಸಭೆಯಲ್ಲಿ ರಾಜ್ಯಪಾಲರ ವಿರುದ್ಧ ತೆಗೆದುಕೊಂಡ ಮಹತ್ವದ ತೀರ್ಮಾನದ ಬಗ್ಗೆ ಸ್ಪಷ್ಟಪಡಿಸಿದರು.
ಈ ನಿರ್ಣಯದ ಮೂಲಕ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗಿ ತಲುಪಲಿದೆ ಎನ್ನುವುದನ್ನು ಕಾದುನೋಡಬೇಕಿದೆ.







in 
