ಹುಮ್ನಾಬಾದ್: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಿಎಫ್‌ಐ ಮತ್ತು ಎಸ್‌ಡಿಪಿಐನಂತಹ ಸಂಘಟನೆಗಳ ಕುರಿತು ಮೃದು ಧೋರಣೆ ತೋರುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.
ಅವರು ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಭಯದ ವಾತಾವರಣವಿದೆ ಎಂದು ಹೇಳಿದರು. ಈ ವೇಳೆ ಬೆಂಗಳೂರಿನ ಕೆಫೆಯಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟ ಮತ್ತು ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ನೇಹಾಳ ಭೀಕರ ಹತ್ಯೆಯಲ್ಲಿ ಮತಾಂಧ ಶಕ್ತಿ ಅಟ್ಟಹಾಸ ಮೆರೆದಿವೆ. ಜನರು ಸಮಾಜದಲ್ಲಿ ಭಯಮುಕ್ತರಾಗಿ ಓಡಾಡಬೇಕಾದರೆ ಮಹಾತ್ಮಾ ಗಾಂಧೀಜಿಯವರು ಕಂಡ ರಾಮ ರಾಜ್ಯದ ಕನಸು ನನಸಾಗಬೇಕು,ಇದಕ್ಕಾಗಿ ನರೇಂದ್ರ ಮೋದಿಯವರಿಗೆ ಮತ ಹಾಕಬೇಕು ಎಂದರು.
ಭ್ರಷ್ಟಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟದ ಹಲವು ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಕ್ಕಾಗಿ ಜೈಲಿನಲ್ಲಿದ್ದಾರೆ. ಕೆಲವರು ಜಾಮೀನಿನ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ನಾಯಕರು ತಮ್ಮ ಭ್ರಷ್ಟಾಚಾರಕ್ಕಾಗಿ ಭೂಮಿ, ಆಕಾಶ, ಸಮುದ್ರವನ್ನೂ ಬಿಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮೋದಿಯವರ ಸಾಧನೆಗಳನ್ನು ವಿವಿಧ ದೇಶಗಳು ಶ್ಲಾಘಿಸುತ್ತಿವೆ. ಧಾನ್ಯ ಉತ್ಪಾದನೆ,ಬಡವರಿಗೆ ಜನೌಷಧಿಯ ಮೂಲಕ ಕಡಿಮೆ ಬೆಲೆಗೆ ಔಷಧಗಳು, ಆಟಿಕೆಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ನಾವು ಸ್ವಾವಲಂಬನೆ ಸಾಧಿಸಿದ್ದೇವೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಮ್ಮ ದೇಶವು ಹಲವಾರು ದೇಶಗಳಿಗೆ ಔಷಧಿಗಳು ಮತ್ತು ಲಸಿಕೆಗಳನ್ನು ಪೂರೈಸಿದೆ ಎಂದು ಹೇಳಿದರು