ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಅತಿಯಾದ ಓಲೈಕೆ ರಾಜಕಾರಣವೇ ಕಾರಣ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ
ಸ್ಪೋಟ ಪ್ರಕರಣದ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ರಾಜ್ಯದಲ್ಲಿ ಅಧಿಕಾರ ಬಂದಾಗಿನಿಂದಲೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಸಮಾಜದಲ್ಲಿ ದುಷ್ಕೃತ್ಯ ಎಸಗುವವರನ್ನು, ಗಲಭೆಕೋರರನ್ನು ಅಮಾಯಕರು ಎನ್ನುವ ಕಾಂಗ್ರೆಸ್ ಸಮರ್ಥನೆಯಿಂದ ದೇಶ ವಿರೋಧಿ ಶಕ್ತಿಗಳಿಗೆ ರಾಜ್ಯದಲ್ಲಿ ಬಲಬಂದಂತಾಗಿದೆ ಎಂದರು. ಇದಲ್ಲದೇ ರಾಜ್ಯ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನವಾಗುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.
ಪೊಲೀಸರ ವರ್ಗಾವಣೆಯಲ್ಲಿನ ಭಾರೀ ಭ್ರಷ್ಟಾಚಾರವು ಅಪ್ರಾಮಾಣಿಕರನ್ನು ಪ್ರಮುಖ ಹುದ್ದೆಗಳಿಗೆ ತಂದಿದೆ. ನಗರದಲ್ಲಿ ಈಗ ಎಲ್ಲಾ ಸಮಾಜಘಾತುಕ ಶಕ್ತಿಗಳು ನಿರ್ಭಯವಾಗಿ ಓಡಾಡುತ್ತಿದ್ದು,ಭಯೋತ್ಪಾದಕರಿಗೆ ಬೆಂಗಳೂರು ನಗರದಲ್ಲಿ ಬಾಂಬ್ ಹಾಕಿ ಅಮಾಯಕರನ್ನು ಹತ್ಯೆ ನಡೆಸುವ ಹುಮ್ಮಸ್ಸು ಬಂದಿದೆ.ಇದಲ್ಲದೇ ಬೆಂಗಳೂರು ನಗರದಲ್ಲಿ ಸಾಕಷ್ಟು ಉಗ್ರರು ಅಡಗಿರುವ ಸಾಧ್ಯತೆಯಿದ್ದು, ಉಗ್ರರ ಸ್ಲೀಪರ್ ಸೆಲ್ ಆಗಿ ಬದಲಾಗಿದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ದುಷ್ಕೃತ್ಯ ಎಸಗಿದ್ದ 15 ಮಂದಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಈ ಸರ್ಕಾರದ ತುಷ್ಟೀಕರಣ ರಾಜಕಾರಣವೇ ಈ ಅನಾಹುತಕ್ಕೆ ಕಾರಣವಾಗಿದೆ.ಆದ್ದರಿಂದ ಈ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ