ನವದೆಹಲಿ: ‘ಅಗ್ನಿಪಥ್’ ಯೋಜನೆಯ ಮೂಲಕ ಸೇನಾ ನೇಮಕಾತಿ ಕುರಿತು ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್, ಇದರಿಂದ ಯುವಕರಿಗೆ ಘೋರ ಅನ್ಯಾಯವಾಗಿದೆ ಎಂದು ಆರೋಪಿಸಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ‘ಅಗ್ನಿಪಥ್’ ಯೋಜನೆಯನ್ನು ರದ್ದುಗೊಳಿಸುವುದಾಗಿ ಮತ್ತು ಸಶಸ್ತ್ರ ಸೇವೆಗಳ ನೇಮಕಾತಿಯ ಹಳೆಯ ವ್ಯವಸ್ಥೆಯನ್ನು ಪುನಃಸ್ಥಾಪಿಸುವುದಾಗಿ ಭರವಸೆ ನೀಡಿದೆ.
‘ಅಗ್ನಿಪಥ್’ ಯೋಜನೆಯಿಂದಾಗಿ ಸಶಸ್ತ್ರ ಪಡೆಗಳಲ್ಲಿ ನಿಯಮಿತ ಉದ್ಯೋಗವನ್ನು ಬಯಸುವ ಯುವಕರಿಗೆ ತೀವ್ರ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಸಶಸ್ತ್ರ ಪಡೆಗಳಲ್ಲಿ ನಿಯಮಿತ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದರಿಂದ ಸುಮಾರು ಎರಡು ಲಕ್ಷ ಯುವಕರು ಮತ್ತು ಮಹಿಳೆಯರ ಭವಿಷ್ಯ ಅನಿಶ್ಚಿತವಾಗಿದೆ ಎಂದು ಖರ್ಗೆ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.