ಮೈಸೂರು: ದೇಶದಲ್ಲಿ ಸಂವಿಧಾನಕ್ಕೆ ಯಾವುದೇ ಅಪಾಯವಿಲ್ಲ ,ಸಂವಿಧಾನ ಅತ್ಯಂತ ಬಲಿಷ್ಠವಾಗಿದೆ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಪಾಯದಲ್ಲಿದೆ ಸಂಸದ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂವಿಧಾನ ಅಪಾಯದಲ್ಲಿದೆ ಎಂದು ಸುಳ್ಳು ಹೇಳಿ ಜನರಿಗೆ ನಂಬಿಸಲು ಹೊರಟ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದ ಇಂತಹ ಗಿಮಿಕ್ ಗಳಿಗೆ ಜನ ಮನ್ನಣೆ ನೀಡುವುದಿಲ್ಲ.ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ ನ್ಯಾಯ ಒದಗಿಸಿದೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ರಾಜ್ಯ ಸರ್ಕಾರದಿಂದ ನಡೆಯುತ್ತಿರುವುದು ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ಜಾಗೃತಿ ಜಾಥಾ ಅಲ್ಲ. ಅದು, ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ವೈಯಕ್ತಿಕ ಸಂವಿಧಾನ ಜಾಥಾ. ಕಾಂಗ್ರೆಸ್ ಕೇವಲ ಓಟಿಗಾಗಿ ಸಂವಿಧಾನ ಅಪಾಯದಲ್ಲಿದೆ ಎಂದು ಸುಳ್ಳು ಹೇಳುತ್ತಿದ್ದಾರೆ.ದೇಶದಾದ್ಯಂತ ಕಾಂಗ್ರೆಸ್ ಅಪತ್ತಿನಲ್ಲಿದೆಯೇ ಹೊರತು ಸಂವಿಧಾನವಲ್ಲ ಎಂದು ತಿರುಗೇಟು ನೀಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಚೆನ್ನಾಗಿಯೇ ಇದೆ, ನಮ್ಮ ಸಂವಿಧಾನ ಗಟ್ಟಿಯಾಗಿದೆ. ಯಾರೂ ಅಲುಗಾಡಿಸಲು ಆಗುವುದಿಲ್ಲ. ಸಂವಿಧಾನಕ್ಕೆ ಧಕ್ಕೆಯಾದರೆ ರಾಜಕೀಯದಲ್ಲಿ ಇರುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಅವರೆಲ್ಲರೂ ಅಧಿಕಾರಕ್ಕೆ ಅಂಟಿ ಕುಳಿತುಕೊಂಡಿದ್ದಾರೆ. ಖರ್ಗೆ ಮುರುಕಲು ಕುರ್ಚಿಯ ಅಧ್ಯಕ್ಷ. ಚುನಾವಣೆಗಾಗಿ ಸ್ಟಂಟ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಎನ್.ಡಿ.ಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ಇಂಡಿಯಾ ಮೈತ್ರಿಕೂಟದ ನಾಯಕರೇ ಹೇಳುತ್ತಿದ್ದಾರೆ. ನಾನು 25 ವರ್ಷ ಕಾಂಗ್ರೆಸ್ ನಲ್ಲಿದ್ದವನು. ತುರ್ತು ಪರಿಸ್ಥಿತಿ ಬಳಿಕ ಕಾಂಗ್ರೆಸ್ ಗೆ ಪರ್ಯಾಯವಾಗಿ ಜನತಾ ಪಕ್ಷ ಉದಯವಾದರೂ ಅದು ಬೆಳೆಯಲಿಲ್ಲ. ಆದರೀಗ ಬಿಜೆಪಿ ದೊಡ್ಡ ಪಕ್ಷವಾಗಿ ಬೆಳೆದಿದೆ ಎಂದರು. ಗ್ಯಾರಂಟಿ ಯೋಜನೆಯನ್ನು ಟೀಕಿಸುವುದಿಲ್ಲ. ಆದರೆ ಬಡವರಿಗಾಗಿ ಒಳ್ಳೆಯದು ಮಾಡಲಿ. 10 ತಿಂಗಳಲ್ಲಿ ಬಡವರನ್ನು ಬಡತನದಿಂದ ಮೇಲೆಕ್ಕೆತ್ತಲಾಗಿದೆ ಎಂದು ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶದಲ್ಲಿ ಬಿಜೆಪಿ ಪರ ಉತ್ತಮ ವಾತಾವರಣವಿದೆ. ಇದನ್ನು ರಾಜಕೀಯ ತಂತ್ರಗಾರಿಕೆ ರೂಪಿಸುವವರೂ ಹೇಳಿದ್ದಾರೆ. ಕಾಂಗ್ರೆಸ್ ಇಷ್ಟು ದುಃಸ್ಥಿತಿಗೆ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಅಲ್ಲಿ ನಾಯಕರ ಕೊರತೆಯೂ ಇದೆ. ಇದ್ದ ನಾಯಕರನ್ನು ಕೆಟ್ಟದಾಗಿ ನಡೆಸಿಕೊಂಡು ಪಕ್ಷ ಬಿಡುವಂತೆ ಮಾಡಿದರು. ಈ ನಡುವೆ ಬಿಜೆಪಿ ಶ್ರೀರಾಮಮಂದಿರ ಮೊದಲಾದ ವಿಷಯಗಳನ್ನು ಇಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿದೆ. ಬಿಜೆಪಿಗೆ ಮತ ಹಾಕಬೇಕು ಎಂದು ಬಯಸುತ್ತಿದ್ದಾರೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು