
ಬೆಳಗಾವಿ(ಸುವರ್ಣಸೌಧ), ಡಿ.12 : ಸರ್ಕಾರದ ಕಾನೂನು ಉಲ್ಲಂಘಿಸಿ ನಿಯಮಬಾಹಿರವಾಗಿ ಬಗರ್ ಹುಕುಂ ಭೂಮಿಯನ್ನು ಅಕ್ರಮ ಒತ್ತುವರಿದಾರರಿಗೆ ಮಂಜೂರು ಮಾಡಿದ ಅಧಿಕಾರಿಗಳ ವಿರುದ್ಧ ಕಂದಾಯ ಇಲಾಖೆ ಶಿಸ್ತುಕ್ರಮದ ಜೊತೆಗೆ ಕ್ರಿಮಿನಲ್ ಮೊಕದ್ದಮೆಯನ್ನೂ ಕೂಡ ದಾಖಲಿಸಲಾಗುವುದು ಎಂದು ವಿಧಾನ ಪರಿಷತ್ ನಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.
ಅವರು ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಶೂನ್ಯವೇಳೆ ಚರ್ಚೆಯ ಸಂದರ್ಭ ಶಾಸಕ ರಮೇಶ್ ಬಾಬು ಅವರ ಪ್ರಶ್ನೆಗೆ ಉತ್ತರ ನೀಡಿ, ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಭೂ ಕಬಳಿಕೆದಾರರಿಗೆ ನೀಡುವ ಪ್ರವೃತ್ತಿಯನ್ನು ಸಹಿಸಲು ಸಾಧ್ಯವಿಲ್ಲ. ಈ ಅಕ್ರಮದಲ್ಲಿ ಕೆಲ ಅಧಿಕಾರಿಗಳು ಭಾಗಿರುವುದು ವಿಷಾದನೀಯ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸುಮಾರು 98 ಜನರಿಗೆ ರೈತರ ಹೆಸರಿನಲ್ಲಿ ಸಾಗುವಳಿ ಚೀಟಿ ನೀಡಿರುವ ಪ್ರಕರಣ ಇಲಾಖೆ ಗಮನದಲ್ಲಿದೆ. ಈ ನಕಲಿ ಸಾಗುವಳಿ ಚೀಟಿ ಮೇಲೆ ಖಾತೆಗೆ ಅರ್ಜಿ ಸಲ್ಲಿಸಿದ ಭೂ ಕಬಳಿಕೆದಾರರ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ರೈತರ ಹೆಸರಲ್ಲಿ ನಕಲಿ ಭೂ ಸಾಗುವಳಿ ಚೀಟಿ ನೀಡುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದ ಕೂಡಲೇ ಕಳೆದ ನವೆಂಬರ್ 13 ರಂದೇ ತನಿಖಾ ತಂಡವನ್ನು ರೂಪಿಸಿ ಚಿಕ್ಕನಾಯಕನಹಳ್ಳಿಗೆ ಕಳುಹಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಅಭಿಲೇಖಾಲಯದ ಅಧಿಕಾರಿಗಳ ಸಹಾಯ ಇಲ್ಲದೆ ಕಡತಗಳನ್ನು ತಿದ್ದಲು ಸಾಧ್ಯವಿಲ್ಲ. ಹೀಗಾಗಿ 2018 ರಿಂದ ಈವರೆಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ಅಭಿಲೇಖಾಲಯದ ಉಸ್ತುವಾರಿ ವಹಿಸಿದ್ದ ಎಲ್ಲಾ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.
ನಕಲಿ ಸಾಗುವಳಿ ಚೀಟಿಯಲ್ಲಿರುವ ಅಧಿಕಾರಿಗಳ ಸಹಿ ಪೈಕಿ ಯಾರ ಸಹಿ ಅಸಲಿ, ಯಾರ ಸಹಿ ನಕಲಿ ಎಂದು ಪತ್ತೆ ಹಚ್ಚುವ ಕೆಲಸದಲ್ಲಿ ತನಿಖಾ ತಂಡ ನಿರತವಾಗಿದೆ. ನಿಜವಾದ ಸಹಿ ತಾಳೆಗೆ ಸಂಬAಧಿಸಿದ ವರದಿ ನೀಡಲು ಅಧಿಕಾರಿಗಳು ಇನ್ನೂ ಒಂದು ವಾರ ಸಮಯ ಕೇಳಿದ್ದಾರೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ವರದಿ ಕೈಸೇರುತ್ತಿದ್ದಂತೆ ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಜೊತೆಗೆ ಇಲಾಖೆ ಶಿಸ್ತುಕ್ರಮವನ್ನೂ ಜರುಗಿಸಲಾಗುವುದು ಎಂದು ಸಚಿವರು ಹೇಳಿದರು.
.
.
