ಉಡುಪಿ:ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಕಳೆದ ಒಂದು ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಅಲ್ಲದೇ ಈ ವಿಚಾರದಲ್ಲಿ ಸರ್ಕಾರ ಯಾವುದೇ ತನಿಖೆ ನಡೆಸಲಿ ಇದರಲ್ಲಿ ನಮ್ಮ ಆಕ್ಷೇಪವಿಲ್ಲ.ಆದರೆ ಪರಶುರಾಮನ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಗೋಲ್ ಮಾಲ್ ಗುತ್ತಿಗೆದಾರ ಕಾರ್ಕಳದ ಪ್ರವಾಸೋದ್ಯಮ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಅವರು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ, ಶಿಲ್ಪಿ ಕೃಷ್ಣ ನಾಯಕ್ ಬಂಧನ ಕುರಿತು ಮಾತನಾಡಿ, ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ ಎಂದವರು ತನಿಖೆ ನಡೆಸಲಿ,ಅದು ಬಿಟ್ಟು ಅಮಾಯಕ ಶಿಲ್ಪಿಯನ್ನು ಒಂದು ವಾರದ ಅವಧಿಗೆ ಪೊಲೀಸ್ ಕಸ್ಟಡಿಗೆ ಪಡೆದು ಆತನಿಗೆ ಪೊಲೀಸರ ಮೂಲಕ ಬೆದರಿಸುವ ಪ್ರಯತ್ನ ನಡೆಯುತ್ತಿದೆ. ಆತನ ಬಂಧನಕ್ಕೂ ಮುನ್ನ ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಗ್ಯಾರೇಜ್ ಮಾಲೀಕರು,ಲಾರಿ ಚಾಲಕರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಇದೀಗ ಶಿಲ್ಪಿಯ ಬಂಧನದ ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ಸಿದ್ಧವಾದ ಪ್ರಶ್ನೆಗಳನ್ನು ತನಿಖಾಧಿಕಾರಿ ಮೂಲಕ ಕೇಳಿ ಶಿಲ್ಪಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಶಾಸಕ ಸುನಿಲ್ ಆರೋಪಿಸಿದರು.
ಅಂದು ಜೀವಂತವಾಗಿದ್ದ ಗೋಪಾಲ ಭಂಡಾರಿ ಹಾಗೂ ವೀರಪ್ಪ ಮೊಯ್ಲಿಯವರ ಶವಯಾತ್ರೆ ಮಾಡಿದ ವ್ಯಕ್ತಿಯಿಂದ ಇಂದು ಅಮಾಯಕ ಶಿಲ್ಪಿಯ ಅನ್ನಕ್ಕೆ ಕಲ್ಲು ಹಾಕಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ವಿರುದ್ಧ ಶಾಸಕ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.
ಮನೆಯಲ್ಲಿರಬೇಕಾದವರನ್ನು ವಿಧಾನಸೌಧಕ್ಕೆ ಕಳಿಸಿದ್ದಾರೆ ಎನ್ನುವ ಉದಯ ಶೆಟ್ಟಿ ಮಾತಿಗೆ ತಿರುಗೇಟು ನೀಡಿದ ಶಾಸಕ ಸುನಿಲ್ ಅವರು, ಜನರ ಆಶೀರ್ವದಿಸಿ ನನ್ನನ್ನು ವಿಧಾನಸೌಧಕ್ಕೆ ಕಳಿಸಿದ್ದಾರೆ,ನನ್ನ ಬಗ್ಗೆ ಮಾತನಾಡುವವರನ್ನು ಜನ ಮನೆಯಲ್ಲಿ ಕೂರಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಜಿಲ್ಲಾಡಳಿತದ ಅನುಮತಿಯೊಂದಿಗೆ ಮೂರ್ತಿ ತೆರವುಗೊಳಿಸಲು ಯತ್ನಿಸಿದಾಗ ರಸ್ತೆಗೆ ಮಣ್ಣು ಹಾಕಿದ್ದು ,ಪೊಲೀಸ್ ತನಿಖೆಗೆ ಪ್ರಶ್ನಾವಳಿ ಸಿದ್ದಪಡಿಸಿದ್ದು ಇದೇ ಕಾಂಗ್ರೆಸ್ ಅಲ್ಲವೇ?,ಜಿಲ್ಲಾಡಳಿತದ ಅನುಮತಿ ಪಡೆದು ಪೊಲೀಸರ ಭದ್ರತೆ ಜತೆಗೆ ಮೂರ್ತಿ ತೆರವು ಮಾಡಿರುವುದು ಪ್ರತಿಮೆ ಕಳ್ಳತನ ಹೇಗೆ ಸಾಧ್ಯ ಎಂದು ಸುನಿಲ್ ಪ್ರಶ್ನಿಸಿದರು.
ಗೋಲ್ ಮಾಲ್ ಗುತ್ತಿದಾರ ಕಾರ್ಕಳದ ಪ್ರವಾಸೋದ್ಯಮಕ್ಕೆ ಮಣ್ಣು ಹಾಕಿದ್ದು ಈತನಿಗೆ ಕಾರ್ಕಳದ ಅಭಿವೃದ್ಧಿ ಸಹಿಸಲು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಪೊಲೀಸರು ಪೂರ್ವಾಗ್ರಹಪೀಡಿತರಾಗಿ ತನಿಖೆ ನಡೆಸುವುದನ್ನು ಬಿಟ್ಟು ನೈಜ ತನಿಖಾಧಿಕಾರಿಗಳಂತೆ ನಡೆದುಕೊಳ್ಳಬೇಕೆಂದರು.