ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮಾನಹಾನಿಕರ ಫೋಸ್ಟ್ ಹಾಕಿರುವ ಹಾದಿಮನಿ ಎಂಬುವರನ್ನು ಬಂಧಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್ ನ್ನು ಟಿ.ಎಫ್.ಹಾದಿಮನಿ ಹರಿಬಿಟ್ಟಿದ್ದಾರೆ. ಮೋದಿ ಅವರ ಬಗ್ಗೆ ಕೋಟ್ಯಂತರ ಜನರು ಗೌರವ- ಅಭಿಮಾನ ಹೊಂದಿದ್ದು, ಅವರ ಮನಸ್ಸಿಗೆ ಈ ಪೋಸ್ಟ್ ನೋಡಿ ನೋವಾಗಿದೆ ಎಂದು ತಿಳಿಸಿದರು. ಇದು ಮೋದಿಯವರಿಗೆ ಕೆಟ್ಟ ಹೆಸರು ತರುವ ದೊಡ್ಡ ತಪ್ಪು ಎಂದು ಆಕ್ಷೇಪಿಸಿದರು.
ಮೋದಿಯವರ ಚಾರಿತ್ರ್ಯವಧೆ ಮಾಡುವ ಹಾದಿಮನಿ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಯಶವಂತಪುರದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ರಾಜ್ಯ ವಕ್ತಾರ ಮತ್ತು ವಕೀಲ ವೆಂಕಟೇಶ ದೊಡ್ಡೇರಿ ಅವರು ದೂರುದಾರ ಎಂದು ತಿಳಿಸಿದರು. ಎಫ್‍ಐಆರ್ ಮಾಡುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಎಂದರು.