ಬೆಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನ ಕೆಳಮನೆ ಲೋಕಸಭೆಯಲ್ಲಿ ಹಿಂದೂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಕ್ಷಮೆಯಾಚಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕನಾಗಿ ಮಾಡಿದ ಚೊಚ್ಚಲ ಭಾಷಣವು ಆಧಾರರಹಿತ ಆರೋಪ ಮತ್ತು ಸುಳ್ಳುಗಳಿಂದ ತುಂಬಿತ್ತು. ರಾಹುಲ್ ಗಾಂಧಿ ಇಡೀ ಹಿಂದೂ ಸಮುದಾಯವನ್ನು ಅವಮಾನಿಸಿದ್ದಾರೆ ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಸಂಸದರ ನಡವಳಿಕೆಯು ನಿಯಮಗಳನ್ನು ಉಲ್ಲಂಘಿಸಿರುವುದರಿAದ ನಾಚಿಕೆಗೇಡಿನ ಸಂಗತಿಯಾಗಿದೆ. ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಸುಳ್ಳನ್ನೇ ಹತ್ತಾರು ಬಾರಿ ಹೇಳಿಕೊಂಡು ದೇಶಾದ್ಯಂತ ಪ್ರವಾಸ ಮಾಡಿದ್ದರು. ಈಗ ವಿಪಕ್ಷ ನಾಯಕನಾಗಿ ಹಳೇ ಚಾಳಿ ಮುಂದುವರೆಸಿದ್ದಾರೆ. ಸಂಸದರೂ ಆದ ಅವರು ತಮ್ಮ ಸ್ಥಾನದ ಘನತೆ ಎತ್ತಿ ಹಿಡಿಯುವ ಬದಲಾಗಿ ಆ ಸ್ಥಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರು ತಮ್ಮ ಭಾಷಣದಲ್ಲಿ ಹಿಂದುಗಳು ಹಿಂಸಾಚಾರ ಮತ್ತು ದ್ವೇಷದಲ್ಲಿ ಹಗಲಿರುಳು ನಿರತರು ಎಂಬ ಮಾತನ್ನು ಉಲ್ಲೇಖಿಸಿದ್ದಾರೆ. ಈ ಮಾತನ್ನು ಹೇಳುವ ಮೂಲಕ ಅವರು ಈ ದೇಶದ ಅಸಂಖ್ಯಾತ ಹಿಂದುಗಳಿಗೆ ಅವಮಾನ ಮಾಡಿದ್ದಾರೆ. ಹಿಂದುಗಳ ತೇಜೋವಧೆ ಮಾಡಿದ್ದಾರೆ. ಅಷ್ಟೇ ಸಾಲದೆಂದು ಅಗ್ನಿವೀರ್, ರೈತರ ಬಗ್ಗೆ, ಅಯೋಧ್ಯೆ ವಿಚಾರ ಮಾತ್ರವಲ್ಲದೆ, ಮೈಕ್ರೋಫೋನ್ ಬಗ್ಗೆ ಮಾತನಾಡಿದ್ದಾರೆ. ಇವೆಲ್ಲ ವಿಚಾರಗಳಲ್ಲಿ ಸುಳ್ಳು ಹೇಳಿಕೆ ನೀಡಿದ್ದಲ್ಲದೆ, ಹಿಂದುಗಳ ತೇಜೋವಧೆ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು.
