ಕಾರ್ಕಳ:ಈ ಬಾರಿಯ ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣಾ ಕಣದಲ್ಲಿ ಒಂದು ಕಡೆ ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಹೇಳಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡಿದ ಪ್ರಭಾವ ಹಾಗೂ ಇನ್ನೊಂದು ಕಡೆ ಕಾರ್ಕಳದ ಬೈಲೂರಿನ ಭಗ್ನಗೊಂಡ ಪರಶುರಾಮ ಮೂರ್ತಿಯ ಕಾರಣದಿಂದ ಕಾರ್ಕಳದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಪರ ಪ್ರಚಾರ ನೆಡೆಸಲು ಬರದಿರುವ ಕಾರಣ ಕಾರ್ಕಳದ ಬಿಜೆಪಿ ನಾಯಕರು ಹತಾಶೆಗೊಂಡಿದ್ದು ಅದರ ನೇರ ಪರಿಣಾಮ ಬಿಜೆಪಿ ಕಾರ್ಯಕರ್ತರ ಮೇಲೆ ಬಿದ್ದಿದೆ ಹಾಗೂ ಬಿಜೆಪಿಗರ ಆತ್ಮಸ್ಥೈರ್ಯ ಕುಸಿದಿರುವಂತೆ ಭಾಸವಾಗುತ್ತಿದೆ ಎಂದು ಕಾರ್ಕಳ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಬಜಗೋಳಿ ಹೇಳಿದ್ದಾರೆ.
ಕಂಚಿನ ಪ್ರತಿಮೆ ಎಂದು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ, ಇದು ಕಂಚು ಅಲ್ಲ ಫೈಬರ್’ನಿಂದ ನಿರ್ಮಿಸಲಾಗಿದೆಯೆಂದು ಆರೋಪಿಸಿ ಪರಶುರಾಮ ಪ್ರತಿಮೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆಯೇ ಎರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುನಿಲ್ ಹೆಗ್ಡೆಯವರು ಧಾರ್ಮಿಕ ಭಾವನೆಗೆ ದಕ್ಕೆ ಎಂದು ಕಾರ್ಕಳ ಪೊಲೀಸರಿಗೆ ಸುಳ್ಳು ದೂರು ನೀಡಿ ಪ್ರಕರಣ ದಾಖಲು ಮಾಡಿದ್ದರು.
ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ನಡೆದ ಮೋಸವು ಸಾರ್ವಜನಿಕರಿಗೆ ತಿಳಿಯಬಾರದು ಎನ್ನುವ ದುರುದ್ದೇಶದಿಂದ ಅದರ ಅಸಲಿಯತ್ತಿನ ಬಗ್ಗೆ ಪ್ರಶ್ನೆ ಎತ್ತಿದವರ ವಿರುದ್ದವೇ ಸುಳ್ಳು ಕೇಸನ್ನು ನೀಡಿ ತದನಂತರ ಸತ್ಯಾಂಶ ಬಯಲಾದಾಗ ಮೌನವಾಗಿದ್ದರು. ಅಂದು ಕಾಂಗ್ರೆಸ್ ಕಾರ್ಯಕರ್ತರು ಪರಶುರಾಮ ಪ್ರತಿಮೆಯ ಸತ್ಯವನ್ನು ಸಾರ್ವಜನಿಕರಿಗೆ ತಿಳಿಸಿ ಎಂದು ಹೋರಾಟ ಮಾಡಿದಾಗ ಹಿಂದು ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕೇಸು ಕೊಟ್ಟ ಸುನಿಲ್ ಹೆಗ್ಡೆಯವರಿಗೆ ಇಂದು ರುಂಡ ಬೇರೆ ಮುಂಡ ಬೇರೆಯಾಗಿ ತನ್ನದೇ ಗ್ರಾಮದಲ್ಲಿ ಅನಾಥವಾಗಿ ಅಪಮಾನಕರ ರೀತಿಯಲ್ಲಿ ನಿಂತಿರುವ ಪರಶುರಾಮ ಪ್ರತಿಮೆಯಿಂದಾಗಿ ಭಾವನೆಗಳಿಗೆ ಧಕ್ಕೆಯಾಗದೇ ಇರುವುದು ಆಶ್ಚರ್ಯಕರ. ಒಂದೋ ಸುನಿಲ್ ಹೆಗ್ಡೆಯವರು ಮೂರ್ತಿ ಭಂಜನೆಯಿಂದ ಸಂತೃಪ್ತಿಯನ್ನು ಹೊಂದಿದ ಮನಸ್ಥಿತಿಯವರು ಆಗಿರಬೇಕು, ಇಲ್ಲವೇ ಕಂಚು ಎಂದು ಪೈಬರ್ ಪ್ರತಿಮೆ ನಿರ್ಮಿಸಿ ಸರ್ಕಾರದ ಹಣವನ್ನು ದೋಚಿರುವುದರಲ್ಲಿ ಸುನಿಲ್ ಹೆಗ್ಡೆಯವರಿಗೂ ಪಾಲು ಇರಬೇಕು, ಅಥವಾ ಇವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರಬೇಕು ಎಂದು ಸಂಶಯ ಪಡಬೇಕಾಗುತ್ತದೆ ಎಂದು ಕೃಷ್ಣ ಶೆಟ್ಟಿ ಹೇಳಿಕೆ ನೀಡಿದ್ದಾರೆ.