ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ಸುದ್ದಿಗಳ ವರದಿಗಾರಿಕೆ ನಿಷೇಧಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸೂಚಿಸಿದೆ.
ದೇವಾಲಯವನ್ನು ನಿರ್ವಹಿಸುತ್ತಿರುವ ಕುಟುಂಬವನ್ನು ಗುರಿಯಾಗಿಸಿಕೊಂಡು ಪ್ರಕಟಿಸಿರುವ ಮಾನಹಾನಿಕರ ವಿಷಯಗಳನ್ನು ತೆಗೆದು ಹಾಕಲು ನಿರ್ದೇಶನ ನೀಡಬೇಕೆಂದು ಕೋರಿ ಧರ್ಮಸ್ಥಳ ದೇವಾಲಯದ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರ ಪೀಠವು ಅರ್ಜಿಯನ್ನು ಹೊಸದಾಗಿ ಪರಿಗಣಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು. ಎಲ್ಲ ದಾಖಲೆಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಅರ್ಜಿದಾರರಿಗೆ ಪೀಠ ಸೂಚಿಸಿತು.
ಇಂತಹ ಆದೇಶಗಳು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತವೆ. ಈ ಪ್ರಕರಣದಲ್ಲಿ ಒಬ್ಬ ನೈರ್ಮಲ್ಯ ಕೆಲಸಗಾರ ಇದ್ದಾನೆ. ನಾವು ಮಾಧ್ಯಮ ನಿರ್ಬಂಧ ಹೇರಿದರೆ ಅವರ ಹೇಳಿಕೆಯನ್ನೂ ವರದಿ ಮಾಡಲು ಸಾಧ್ಯವಿಲ್ಲ. ನಾವು ಮುಕ್ತ ಸ್ವಾತಂತ್ರ್ಯದ ದೇಶದಲ್ಲಿ ವಾಸಿಸುತ್ತಿದ್ದೇವೆ’ ಎಂದು ಪೀಠ ಅಭಿಪ್ರಾಯಪಟ್ಟಿತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೊಹಟಗಿ, ‘ಸ್ವೇಚ್ಛಾಚಾರದ ವರದಿಗೆ ತಡೆಯಾಜ್ಞೆ ನೀಡಬೇಕು. ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ್ದನ್ನು ಪ್ರಶ್ನಿಸಿ ಒಬ್ಬರು ಹೈಕೋರ್ಟ್ ಮೊರೆ ಹೋಗುತ್ತಾರೆ. ಇದರಿಂದ, ಉಳಿದ 299 ಮಂದಿಗೂ ಅನುಕೂಲವಾಗುತ್ತದೆ. ನ್ಯಾಯಾಲಯ ನಮಗೆ ಸ್ವಲ್ಪ ರಕ್ಷಣೆ ನೀಡಬೇಕು’ ಎಂದು ಕೋರಿದರು. ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮಾನಹಾನಿಕರ ವರದಿಗಳನ್ನು ಪ್ರಕಟಿಸುತ್ತಿವೆ ಎಂದು ಅವರು ಗಮನ ಸೆಳೆದರು.
‘ವಿಚಾರಣಾ ನ್ಯಾಯಾಲಯದ ಮುಂದೆ ಈ ವಿಷಯವನ್ನು ವಾದಿಸಿ. ನ್ಯಾಯಾಲಯವು ಸ್ವತಂತ್ರವಾಗಿ ಈ ವಿಷಯದ ಬಗ್ಗೆ ನಿರ್ಧರಿಸಬಹುದು’ ಎಂದು ಪೀಠ ಹೇಳಿದೆ.