

ಹೆಬ್ರಿ: ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿ.ಗೋಪಾಲ ಭಂಡಾರಿಯವರ ನೆನಪು ಶಾಶ್ವತವಾಗಿ ಉಳಿಯಬೇಕೆನ್ನುವ ಮಹದಾಸೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಗೋಪಾಲ ಭಂಡಾರಿಯವರ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಿದ್ದರು.
ಭಂಡಾರಿಯವರ ಜನ್ಮ ದಿನದಂದೇ ಅವರ ಪ್ರತಿಮೆ ಅನಾವರಣ ನಡೆಸುವ ಉದ್ದೇಶದಿಂದ ಜುಲೈ 7 ರಂದು ಪ್ರತಿಮೆ ಅನಾವರಣ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಿಗದಿಪಡಿಸಲಾಗಿದೆ. ಆದರೆ ಈ ಕಾರ್ಯಕ್ರಮದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ ಸ್ಪೋಟಗೊಂಡಿದೆ.
ಗೋಪಾಲ ಭಂಡಾರಿಯವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರನ್ನು ಆಹ್ವಾನಿಸಿರುವುದೇ ಕಾಂಗ್ರೆಸ್ ಪಕ್ಷದ ಒಂದು ಬಣದ ಅಸಮಾಧಾನಕ್ಕೆ ಕಾರಣ ಎನ್ನುವ ವಿಚಾರ ಇದೀಗ ಬಹಿರಂಗವಾಗಿದೆ.
ಗೋಪಾಲ ಭಂಡಾರಿಯವರು ಕಾಂಗ್ರೆಸ್ ಕಟ್ಟಾಳು ಆಗಿದ್ದರಿಂದ ಈ ಕಾರ್ಯಕ್ರಮವನ್ನು ಕಾಂಗ್ರೆಸ್ ನಾಯಕರ ಮುಂದಾಳತ್ವದಲ್ಲೇ ಸಾರ್ವಜನಿಕರ ಜತೆ ಸೇರಿ ಪ್ರತಿಮೆ ಅನಾವರಣದ ರೂಪುರೇಷೆ ಸಿದ್ಧಪಡಿಸಲಾಗಿತ್ತು.
ಆದರೆ ಈ ಕಾರ್ಯಕ್ರಮದ ಆಯೋಜಕರ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಅಸಮಾಧಾನಕ್ಕೆ ಕಾರಣವಾಗಿದೆ. ಆಯೋಜಕರು ಎಲ್ಲರ ಅಭಿಪ್ರಾಯ ಹಾಗೂ ವಿಶ್ವಾಸಕ್ಕೆ ಪಡೆದೇ ಈ ಕಾರ್ಯಕ್ರಮ ಆಯೋಜಿಸಬೇಕಿತ್ತು ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ವಾದ. ಕಾರ್ಯಕ್ರಮಕ್ಕೆ ಶಾಸಕ ಸುನಿಲ್ ಕುಮಾರ್ ಅವರನ್ನು ಆಹ್ವಾನಿಸಿರುವುದು ಕಾಂಗ್ರೆಸ್ ಪಕ್ಷದ ಉದಯ ಶೆಟ್ಟಿ ಬಣದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣ ಎನ್ನುವ ಮಾತುಗಳು ಗುಟ್ಟಾಗಿ ಉಳಿದಿಲ್ಲ.ಯಾಕೆಂದರೆ ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ಈ ಕಾರ್ಯಕ್ರಮದ ರೂವಾರಿ ನೀರೆ ಕೃಷ್ಣ ಶೆಟ್ಟಿಯವರು ಹೇಳೋದೇ ಬೇರೆ, ಇದು ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲ,ಇದೊಂದು ಸಾರ್ವಜನಿಕ ಕಾರ್ಯಕ್ರಮವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಗೋಪಾಲ ಭಂಡಾರಿಯವರ ಪ್ರತಿಮೆ ಅನಾವರಣ ಮಾಡುತ್ತಿರುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅನುಮತಿ ಪತ್ರ ಪಡೆಯಲಾಗಿದೆ. ಅಲ್ಲದೇ ಈ ಕಾರ್ಯಕ್ರಮವನ್ನು ಪಕ್ಷದ ಚಿಹ್ನೆಯಡಿ ನಡೆಸುವಂತಿಲ್ಲ ಎಂಬ ಸೂಚನೆಯಿದೆ. ಆದ್ದರಿಂದ ಇದು ಸಾರ್ವಜನಿಕ ಕಾರ್ಯಕ್ರಮವಾಗಿದೆ. ಇದರಲ್ಲಿ ಯಾವುದೇ ಪಕ್ಷದ ಕಾರ್ಯಕ್ರಮವಲ್ಲ,ಇದು ಸಾರ್ವಜನಿಕರು ಸೇರಿ ನಡೆಸುವ ಕಾರ್ಯಕ್ರಮ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಶಾಸಕ ಸುನಿಲ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಬಣದ ನಡುವಿನ ಗುದ್ದಾಟವೇ ಈ ಎಲ್ಲಾ ಗೊಂದಲಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ರಾಜಕೀಯ ಏನೇ ಇರಲಿ ದಿ. ಗೋಪಾಲ ಭಂಡಾರಿಯವರ ವ್ಯಕ್ತಿತ್ವ, ಸರಳತೆ, ಬಡವರು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕುರಿತ ಕಾಳಜಿ ಇವೆಲ್ಲವೂ ಅವರನ್ನು ಎತ್ತರದ ಸ್ಥಾನಕ್ಕೆ ಏರಿಸಿದೆ. ಗೋಪಾಲ ಭಂಡಾರಿಯವರು ಕೇವಲ ಒಂದು ಪಕ್ಷಕ್ಕೆ ಮಾತ್ರ ಸೀಮಿತವಲ್ಲ ಅವರ ಜೀವನ ಮೌಲ್ಯಗಳು ಇಡೀ ಸಮಾಜಕ್ಕೆ ಆದರ್ಶಪ್ರಾಯವಾಗಿದೆ.ಈ ಹಿನ್ನೆಲೆಯಲ್ಲಿ ಎಲ್ಲರೂ ಪಕ್ಷಬೇಧ ಮರೆತು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರನ್ನು ಗೌರವಿಸಬೇಕೆನ್ನುವುದೇ ಎಲ್ಲರ ಅಶಯ.



