Share this news

ನವದೆಹಲಿ: ಕೋಲ್ಕತಾದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ, ಹತ್ಯೆ ಹಾಗೂ ನಂತರ ನಡೆದ ದಾಂಧಲೆಗಳ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಇಂದಿನಿಂದ (ಆ.17)ಬೆಳಿಗ್ಗೆ 6  ಗಂಟೆಯಿಂದ 24 ಗಂಟೆಗಳ ಕಾಲ ದೇಶಾದ್ಯಂತ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.

ಈ ಅವಧಿಯಲ್ಲಿ ತುರ್ತು ಸೇವೆಗಳು ಎಲ್ಲಾ ಆಸ್ಪತ್ರೆಗಳಲ್ಲಿ ಎಂದಿನAತೆ ಲಭ್ಯವಿರುತ್ತವೆ. ಆದರೆ, ಹೊರರೋಗಿ ವಿಭಾಗಗಳು (ಒಪಿಡಿ) ಕೆಲಸ ಮಾಡುವುದಿಲ್ಲ. ಇಡೀ ದಿನ ಯಾವುದೇ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದಿಲ್ಲ. ಆಧುನಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೂ ಈ ಬಂದ್ ಅನ್ವಯಿಸುತ್ತದೆ ಎಂದು ಐಎಂಎ ಹೇಳಿದೆ.

ಆಸ್ಪತ್ರೆಗಳಲ್ಲಿ ವೈದ್ಯರಿಗೆ ಭದ್ರತೆ ನೀಡುವುದು ಅಧಿಕಾರಿಗಳ ಹೊಣೆ. ಅವರು ತಮ್ಮ ಜವಾಬ್ದಾರಿಯಲ್ಲಿ ವಿಫಲರಾಗಿರುವುದರಿಂದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ದೈಹಿಕ ಹಲ್ಲೆ ಹಾಗೂ ಅಪರಾಧ ಕೃತ್ಯಗಳು ಸಂಭವಿಸುತ್ತಿವೆ. ಇಂದು ಮಹಿಳಾ ವೈದ್ಯರಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಐಎಂಎ ವಿಷಾದ ವ್ಯಕ್ತಪಡಿಸಿದೆ.

ಇದೇ ವೇಳೆ ದೇಶದಾದ್ಯಂತ ಇರುವ ಎಲ್ಲಾ ಆಸ್ಪತ್ರೆಗಳನ್ನು ವಿಮಾನ ನಿಲ್ದಾಣಗಳಂತೆ ಸುರಕ್ಷಿತ ವಲಯಗಳಾಗಿ ಘೋಷಿಸಿಬೇಕು. ಆರೋಗ್ಯ ಸೇವೆಯಲ್ಲಿರುವ ಸಿಬ್ಬಂದಿ ಮೇಲೆ ನಡೆಯುವ ಹಿಂಸಾಚಾರ ತಡೆಯಲು ಕಾನೂನು ತರಬೇಕು. ಅತ್ಯಾಚಾರ ಹಾಗೂ ಕೊಲೆಯಾದ ವೈದ್ಯೆ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು. ರೇಪ್ ಪ್ರಕರಣವನ್ನು ಶೀಘ್ರವಾಗಿ ತನಿಖೆ ಮಾಡುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಹಾಗೂ ಕೊನೆಯದಾಗಿ ಸ್ಥಾನಿಕ ವೈದ್ಯರ ಕರ್ತವ್ಯದ ಅವಧಿ ಮತ್ತು ಕರ್ತವ್ಯದ ಸ್ಥಿತಿಗತಿಯನ್ನು ಪರಿಶೀಲಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಮುಖ್ಯಸ್ಥ ಡಾ ಆರ್.ವಿ. ಅಶೋಕನ್ ಒತ್ತಾಯಿಸಿದ್ದಾರೆ.

                        

                          

                        

                          

 

`

Leave a Reply

Your email address will not be published. Required fields are marked *