ಕಾರ್ಕಳ ಏ, 29: ಡಾ. ಎಚ್,ಎಸ್ ಬಲ್ಲಾಳ್ ಮತ್ತು ಡಾ ಎಚ್ ಸುದರ್ಶನ್ ಬಲ್ಲಾಳ್ ಇವರು ತಮ್ಮ ತಂದೆಯವರಾದ ಬೇಳಂಜೆ ಸಂಜೀವ ಹೆಗ್ಡೆಯವರ ನೆನಪಾರ್ಥ ಹೆಬ್ರಿಯ ಬೆಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಮೂಲಕ ಆರೋಗ್ಯ ಮೂಲಸೌಕರ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಕಾರ್ಕಳದ ಡಾ ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಅತ್ಯಾಧುನಿಕ ಡಯಾಲಿಸಿಸ್ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ. ಇಂದು ನಡೆದ ಔಪಚಾರಿಕ ಹಸ್ತಾಂತರ ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರದ ಹೆಸರಾಂತ ಗಣ್ಯರು ಉಪಸ್ಥಿತರಿದ್ದರು.
ಹೆಬ್ರಿಯ ಬೆಳಂಜೆ ಸಂಜೀವ ಹೆಗಡೆ ಟ್ರಸ್ಟ್ ಹಾಗೂ ಮಣಿಪಾಲ ಹೆಲ್ತ್ ಎಂಟರ್‌ಪ್ರೈಸೆಸ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಸ್ಥರಾದ ಡಾ ಎಚ್ ಸುದರ್ಶನ್ ಬಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಡಯಾಲಿಸಿಸ್ ಯಂತ್ರವನ್ನು ಹಸ್ತಾಂತರಿಸಿ ಮಾತನಾಡಿ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಜಾಗತಿಕ ಹೊರೆಯ ಕುರಿತು ವಿವರಿಸಿದರು. ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿನ ದುರ್ಬಲ ಜನಸಂಖ್ಯೆಯ ಮೇಲೆ ವ್ಯಾಪಕ ಪರಿಣಾಮವನ್ನು ಒತ್ತಿಹೇಳಿದರು. ಪ್ರಪಂಚದಾದ್ಯಂತ ಸುಮಾರು 850 ಮಿಲಿಯನ್ ವ್ಯಕ್ತಿಗಳು ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದ ಬಾಧಿತರಾಗಿರುವುದರಿಂದ, ಜಾಗೃತಿ ಮತ್ತು ಸಂಬಂಧಿತ ಚಿಕಿತ್ಸಾ ತಂತ್ರಗಳ ಅಗತ್ಯವು ಅತ್ಯಗತ್ಯವಾಗಿರುತ್ತದೆ ಎಂದು ಹೇಳಿದರು ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ರೋಗಿಗಳಲ್ಲಿ ಡಯಾಲಿಸಿಸ್‌ನ ಪ್ರಾಮುಖ್ಯತೆಯ ಬಗ್ಗೆ ಅವರು ಒತ್ತಿ ಹೇಳಿದರು.
ಗೌರವ ಅಥಿತಿಯಾಗಿದ್ದ ಮಾಹೆ ಮಣಿಪಾಲದ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಎಂ ಡಿ ವೆಂಕಟೇಶ್, ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯೊಂದಿಗೆ ಸಂಬಂಧಿಸಿದ ಪ್ರತಿಕೂಲ ಪರಿಣಾಮವನ್ನು ತಡೆಯುವಲ್ಲಿ ತಗ್ಗಿಸುವಲ್ಲಿ, ಆರಂಭಿಕ ಹಂತದಲ್ಲೇ ಕಾಯಿಲೆ ಪತ್ತೆಹಚ್ಚಬೇಕೆಂದರು. ಮೂತ್ರಪಿಂಡ ಕಾಯಿಲೆ ಮತ್ತು ಹೃದಯರಕ್ತನಾಳದ ಆರೋಗ್ಯದ ನಡುವಿನ ಸಂಬಂಧವನ್ನು ವಿವರಿಸಿದರು. ಇದರಿಂದಾಗುವ ಅಪಾಯಕಾರಿ ಅಂಶಗಳ ಬಗ್ಗೆ ವಿವರಿಸಿದರು.
ಇದೇ ವೇಳೆ ಮಾತನಾಡಿದ ಅವರು, ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯಲ್ಲಿ ಶೀಘ್ರವೇ ರಕ್ತನಿಧಿ ಮತ್ತು ಸಿ ಟಿ ಸ್ಕ್ಯಾನ್ ಸೇವೆಯನ್ನು ಆರಂಭಿಸಲಾಗುವುದೆಂದರು.
ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಸಂಸ್ಥಾಪಕ ನಾಡೋಜ ಡಾ. ಜಿ ಶಂಕರ್ ಮುಖ್ಯ ಅತಿಥಿಯಾಗಿ ಮಾತನಾಡಿ, ತಮ್ಮ ಟ್ರಸ್ಟ್ ವತಿಯಿಂದ ಕೈಗೊಂಡ ವೈದ್ಯಕೀಯ ರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದೇವೆ ಎಂದರು.
ಹೆಬ್ರಿಯ ಬೆಳಂಜೆ ಸಂಜೀವ ಹೆಗಡೆ ಟ್ರಸ್ಟಿ ಹಾಗೂ ಮಾಹೆ ಮಣಿಪಾಲದ ಕುಲಾಧಿಪತಿ ಡಾ. ಹೆಚ್.ಎಸ್.ಬಲ್ಲಾಳ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, ಬಡ ರೋಗಿಗಳ ನೋವನ್ನು ನಿವಾರಿಸಲು ಸೇವೆ ಸಲ್ಲಿಸುವ ಪರೋಪಕಾರಿ ಕೊಡುಗೆಗಳಿಗಾಗಿ ಟ್ರಸ್ಟ್‌ಗಳು ಮತ್ತು ಸರಕಾರೇತರ ಸಂಘ ಸಂಸ್ಥೆಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಹೆ ಮಣಿಪಾಲದ ಸಹ ಕುಲಪತಿ (ಆರೋಗ್ಯವಿಜ್ಞಾನ) ಡಾ. ಶರತ್ ಕುಮಾರ್ ರಾವ್, ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್ ವೇಣುಗೋಪಾಲ್, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮೂತ್ರಪಿಂಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ದರ್ಶನ್ ರಂಗಸ್ವಾಮಿ ಸ್ವಾಗತಿಸಿದರು ಮತ್ತು ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ ಬಲ್ಲಾಳ ವಂದಿಸಿದರು.