
ಬೆಂಗಳೂರು,ಜ.9: ಅಪ್ರಾಪ್ತ ಹೆಣ್ಣು ಮಕ್ಕಳು, ಮಹಿಳೆಯರ ಮೇಲಿನ ದೌರ್ಜನ್ಯದಂಥ ಪ್ರಕರಣಗಳನ್ನು ತಡೆಯಲು,ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ರಾಜ್ಯದ ಎಲ್ಲ 31 ಜಿಲ್ಲೆಗಳ ಐದು ಪೊಲೀಸ್ ಆಯುಕ್ತಾಲಯಗಳಲ್ಲಿ ‘ಅಕ್ಕ ಪಡೆ’ ಯೋಜನೆಯನ್ನು ಒಳಾಡಳಿತ ಇಲಾಖೆ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೆಲವು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಈಗ ಎಲ್ಲ ಜಿಲ್ಲೆ ಮತ್ತು ಕಮಿಷನರೇಟ್ಗಳ ವ್ಯಾಪ್ತಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದರು.
ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆ ಎದುರಿಸುತ್ತಿರುವ ಮಹಿಳೆಯರು ಮಕ್ಕಳಿಗೆ ಸಕಾಲದಲ್ಲಿ ನೆರವಿನ ಹಸ್ತ ಚಾಚುವುದರ ಜತೆಗೆ ಭಯಮುಕ್ತ ವಾತಾವರಣ ಸೃಷ್ಟಿಸುವುದೂ ಈ ಪಡೆಯ ಮುಖ್ಯ ಉದ್ದೇಶ. ಅಲ್ಲದೇ, ಶಿಕ್ಷಣದ ಮೂಲಕ ಹಕ್ಕುಗಳು, ಕಾನೂನುಗಳು, ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಅವರು ವಿವರಿಸಿದರು.

.
.
