ಕರಾವಳಿ ನ್ಯೂಸ್ ಡೆಸ್ಕ್
ಇಂದಿನ ದಿನಗಳಲ್ಲಿ ಜಗತ್ತು ತಂತ್ರಜ್ಞಾನಕ್ಕೆ ಎಷ್ಟು ಅವಲಂಬಿತವಾಗಿದೆ ಎಂದರೆ ನಮ್ಮ ಬ್ಯಾಂಕ್ ಖಾತೆಗಳಲ್ಲಿ ಲಕ್ಷಗಟ್ಟಲೆ ಹಣವಿದ್ದರೂ ಸರ್ವರ್ ಡೌನ್ ಇದ್ದಾಗ ನಮಗೆ ತುರ್ತು ಸಂದರ್ಭದಲ್ಲಿ ಕೂಡ ಹಣ ಸಿಗಲಾರದ ಪರಿಸ್ಥಿತಿ ಇದೆ. ಯಾಕೆಂದರೆ ಇಂದು ಇಂಟರ್’ನೆಟ್ ಇಲ್ಲದೇ ಜಗತ್ತು ಒಂದು ಕ್ಷಣ ಕೂಡ ನಡೆಯಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.
ತಂತ್ರಜ್ಞಾನದ ಮೇಲೆ ನಮ್ಮ ಮಿತಿಮೀರಿದ ಅವಲಂಬನೆ ಆನ್ ಲೈನ್ ಕಳ್ಳರಿಗೂ ಕೂಡ ವರದಾನವಾಗಿದೆ.
ಬ್ಯಾಂಕ್ ಖಾತೆಗಳಿಗೆ ಆಧಾರ್, ಪಾನ್ ಕಾರ್ಡ್ ಮುಂತಾದ ದಾಖಲೆಗಳನ್ನು ಲಿಂಕ್ ಮಾಡಬೇಕೆಂದು ಬ್ಯಾಂಕು ಗಳೇ ತಮ್ಮ ಗ್ರಾಹಕರಿಗೆ ತಿಳಿಸುತ್ತವೆ.ಇದನ್ನೇ ಬಂಡವಾಳ ಮಾಡಿಕೊಳ್ಳುವ ಡಿಜಿಟಲ್ ಕಳ್ಳರು ನಕಲಿ ಸಿಮ್ ಬಳಸಿ ಬ್ಯಾಂಕುಗಳು ಲೋಗೋ ಬಳಸಿ ವಾಟ್ಸಾಪ್ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅಪಲೋಡ್ ಮಾಡಲು ಈ ಲಿಂಕ್ ಒತ್ತಿ ಎಂದು ಲಿಂಕ್ ಕಳಿಸುತ್ತಾರೆ. ಓದು ಬರಹ ಅಷ್ಟೇನು ಗೊತ್ತಿರದ ಹಾಗೂ ತಂತ್ರಜ್ಞಾನದ ಮಾಹಿತಿ ಇಲ್ಲದಿರುವ ಗ್ರಾಹಕರು ಈ ನಕಲಿ ಲಿಂಕ್ ಬಳಸಿ ಲಕ್ಷಾಂತರ ರೂ ಹಣ ಕಳೆದುಕೊಂಡವರಿದ್ದಾರೆ. ಈ ಚಾಲಾಕಿ ಕಳ್ಳರು ಇದೇ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಕುಳಿತಲ್ಲೇ ಅನಾಯಾಸವಾಗಿ ಲಕ್ಷಾಂತರ ರೂ ಹಣ ಗಳಿಸುತ್ತಾರೆ.
ನಿಜವಾಗಿಯೂ ಬ್ಯಾಂಕುಗಳು ಅಥವಾ RBI ಎಂದಿಗೂ ನಿಮ್ಮ ಖಾತೆಗೆ ಆಧಾರ್ ಅಥವಾ ಪಾನ್ ಲಿಂಕ್ ಮಾಡಿ ಎಂದು ಯಾವ ಗ್ರಾಹಕನಿಗೂ ವಾಟ್ಸಾಪ್ ಅಥವಾ ಮೇಲೆ ಮೂಲಕ ವೈಯುಕ್ತಿಕ ಮೆಸೇಜ್ ಕಳುಹಿಸುವುದಿಲ್ಲ.
ಆದ್ದರಿಂದ ಯಾವುದೇ ಬ್ಯಾಂಕುಗಳ ಗ್ರಾಹಕರು ನಿಮ್ಮ ವಾಟ್ಸಾಪ್ , ಫೇಸ್’ಬುಕ್, ಇನ್ಸ್ಟಾಗ್ರಾಂ, ಈ ಮೇಲ್ ಗಳಿಗೆ ಬರುವ ಲಿಂಕ್ ಗಳನ್ನು ತಪ್ಪಿಯೂ ಕ್ಲಿಕ್ ಮಾಡಬೇಡಿ. ನಿಮ್ಮ ಖಾತೆ ಕುರಿತು ಏನಾದರೂ ಸಮಸ್ಯೆಗಳಿದ್ದರೆ ನಿಮ್ಮ ಹತ್ತಿರದ ಬ್ಯಾಂಕುಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ. ಯಾರೋ ಅಪರಿಚಿತ ಖದೀಮರು ಕಳಿಸುವ ನಕಲಿ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಳ್ಳುವ ಬದಲು ಬಂದ ಮೆಸೇಜನ್ನು ಡಿಲೀಟ್ ಮಾಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬಹುದು.














