ಬೆಂಗಳೂರು, ಆ 28 : ಮಂಗಳೂರಿನ ಹುಡುಗಿ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಕೊನೆಗೂ ಒಂಟಿ ಜೀವನಕ್ಕೆ ಗುಡ್‌ಬೈ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ದಂಪತಿ ಪುತ್ರ ರೋಶನ್ ಅವರೊಂದಿಗೆ ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಗುರುವಾರ ಅನುಶ್ರೀ ಮದುವೆ ಅದ್ದೂರಿಯಾಗಿ ನೆರವೇರಿತು. ಬೆಂಗಳೂರಿನ ಹೊರವಲಯದಲ್ಲಿರೋ ರೆಸಾರ್ಟ್‌ನಲ್ಲಿ ಬೆಳಗ್ಗೆ 10.56ಕ್ಕೆ ಮಾಂಗಲ್ಯಧಾರಣೆಯಾಗಿದೆ. 37 ವರ್ಷದ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗಣೇಶ ಚತುರ್ಥಿಯಂದು ಬುಧವಾರ ರಾತ್ರಿ ಅನುಶ್ರೀ ಹಾಗೂ ರೋಶನ್ ಅವರ ಅರಿಶಿಣ ಶಾಸ್ತ್ರ ನೆರವೇರಿತ್ತು.
ರೆಸಾರ್ಟ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಚಿತ್ರರಂಗದ ರಾಜ್ ಬಿ ಶೆಟ್ಟಿ, ಜೀ ವಾಹಿನಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ಕಾವ್ಯಾ ಶಾ, ಚೈತ್ರಾ ಜೆ ಆಚಾರ್, ಶರಣ್, ಸೋನಲ್ ಮೊಂಥೆರೋ ಮುಂತಾದವರು ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದಾರೆ.