ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ವೈರಲ್ ಆಗಿದ್ದ ವೀಡಿಯೋಗಳು ನಕಲಿ ಅಲ್ಲ ಅಸಲಿ ಎನ್ನುವ ವಿಚಾರ ಬಹಿರಂಗಗೊಂಡಿದೆ.
ಮಹಿಳೆಯರ ಮೇಲೆ ಅತ್ಯಾಚಾರ ಆರೋಪದಡಿ ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳು ಅಸಲಿ ಎಂದು ಎಫ್ ಎಸ್ ಎಲ್ ವರದಿ ಬಹಿರಂಗಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ, ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಪೆನ್‌ಡ್ರೈವ್‌ಗಳಿಂದ ಹತ್ತಾರು ಅಶ್ಲೀಲ ವಿಡಿಯೋಗಳನ್ನು ಸಂಗ್ರಹ ಮಾಡಿ ಈ ವಿಡಿಯೋಗಳು ಅಸಲಿಯೋ, ನಕಲಿಯೋ ಎಂದು ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಇದರ ರಿಪೋರ್ಟ್ ಬಂದಿದ್ದು, ಎಲ್ಲಾ ವಿಡಿಯೋಗಳು ಅಸಲಿ ಎಂದು ಗೊತ್ತಾಗಿದೆ.
ಅಲ್ಲದೇ ಯಾವ ವಿಡಿಯೋಗಳನ್ನು ತಿರುಚಲಾಗಿಲ್ಲ ಎಂದು FSL (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೋಗಳಲ್ಲಿ ಪುರಷನ ಮುಖ ಸ್ಪಷ್ಟವಾಗಿ ಕಂಡುಬಂದಿಲ್ಲ. ಹೀಗಾಗಿ ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎಂಬುವುದು ತನಿಖೆಯ ಬಳಿಕವೇ ತಿಳಿದುಬರಲಿದೆ ಎನ್ನಲಾಗಿದೆ.
ಇನ್ನು ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಈ ಪ್ರಕರಣದಲ್ಲಿ ಎಚ್ ಡಿ ರೇವಣ್ಣ ಅವರು ಹತ್ತು ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು.
`