ಕಾರ್ಕಳ: ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಗೆ ಸದಸ್ಯರ ನೇಮಕ ಹಾಗೂ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ಹಾಲಿ ವ್ಯವಸ್ಥಾಪನ ಸಮಿತಿಯ ಸದಸ್ಯರು ಹಾಗೂ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಅಜೆಕಾರು ದೇವಸ ಶಿವರಾಮ ಶೆಟ್ಟಿಯವರು ತಮ್ಮ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ.
ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸೋಮವಾರ ದೇವಸ್ಥಾನದ ಆಡಳಿತಾಧಿಕಾರಿ ಪ್ರಮೋದ್ ಸುವರ್ಣ ಅವರ ನೇತೃತ್ವದಲ್ಲಿ ನಡೆದಿದ್ದು, ಇದೀಗ ಕಳೆದ 50 ವರ್ಷಗಳಿಂದ ದೇವಸ್ಥಾನ ಅಭಿವೃದ್ದಿ ಚಟುವಟಿಕೆಗಳಲ್ಲಿ ಹಾಗೂ ಧಾರ್ಮಿಕ ಉತ್ಸವಗಳಲ್ಲಿ ನಿರಂತವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ದಾನಿ ಮುಂಬಯಿ ಉದ್ಯಮ ಶಿವರಾಮ ಶೆಟ್ಟಿಯವರು ತನ್ನ ಸದಸ್ಯತ್ವಕ್ಕೆ ರಾಜೀನಾಮೆ ಪ್ರಕಟಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಜುಲೈ 14 ರಂದು ನಡೆದ ಅದ್ಯಕ್ಷರ ಆಯ್ಕೆ ಪ್ರಕ್ರಿಯೆಯಿಂದಲೂ ಶಿವರಾಮ ಶೆಟ್ಟಿಯವರು ದೂರ ಉಳಿದಿದ್ದರು. ಉಡುಪಿ ಜಿಲ್ಲಾ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರಿಗೆ ಶಿವರಾಮ ಶೆಟ್ಟಿಯವರು ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ದೇವಸ್ಥಾನದ ಜಾಗವನ್ನು ಕಬಳಿಸಿರುವ ವ್ಯಕ್ತಿಯನ್ನೇ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಸದಸ್ಯನಾಗಿ ಆಯ್ಕೆ ಮಾಡಲಾಗಿದ್ದು, ಅಕ್ರಮ ಎಸಗಿರುವ ವ್ಯಕ್ತಿ ಸಮಿತಿಯಲ್ಲಿರುವ ಹಿನ್ನಲೆಯಲ್ಲಿ ಈ ಸಮಿತಿಯಲ್ಲಿ ಕಾರ್ಯನಿರ್ವಹಿಸಲು ನನ್ನ ಮನಸ್ಸು ಒಪ್ಪದ ಕಾರಣದಿಂದ ರಾಜೀನಾಮೆ ನೀಡುತ್ತಿರುವುದಾಗ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಾನು ಸುಮಾರು 50 ವರ್ಷಳಿಂದ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ವ್ಯವಸ್ಥಾಪನ ಸಮಿತಿಯ ಆಧ್ಯಕ್ಷನಾಗಿ ಸೇವೆಯನ್ನು ಪ್ರಮಾಣಿಕವಾಗಿ ಸಲ್ಲಿಸಿರುತ್ತೇನೆ. ನನ್ನ ನೇತೃತ್ವದ ಸಮಿತಿಯ ಆಡಳಿತದ ಅವಧಿಯಲ್ಲಿ ಶ್ರೀ ದೇವರ ಅನುಗ್ರಹದಿಂದ, ಭಕ್ತಾಧಿಗಳನ್ನು ಒಗ್ಗೂಡಿಸಿ, ದಾನಿಗಳ ನೆರವಿನೊಂದಿಗೆ, ನನ್ನ ಸ್ವಂತ ಹಣವನ್ನೂ ಸೇರಿಸಿ ಸಮಗ್ರವಾಗಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವವನ್ನು ಮಾಡಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಅನುವಾಗುವ ನಿಟ್ಟಿನಲ್ಲಿ ಮೂಲಭೂತ ಆವಶ್ಯಕತೆಯನ್ನು ಪೂರೈಸಲಾಗಿದೆ. ಅಲ್ಲದೇ ಧಾರ್ಮಿಕ ಅನುಷ್ಠಾನಕ್ಕೆ ಚ್ಯುತಿಯಾಗದಂತೆ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವಸ್ಥಾನದ ಉತ್ಸವಾದಿಗಳನ್ನು ವೈಭವದಿಂದ ಆಚರಿಸಲಾಗುತ್ತಿದೆ. ನಿತ್ಯಪೂಜಾ ಕೈಕಂರ್ಯಗಳನ್ನು ಯಥಾವತ್ತಾಗಿ ಅರ್ಚಕರು ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ. ದೇಸ್ಥಾನದಲ್ಲಿ ಯಾವುದೇ ರಾಜಕೀಯ ಪಕ್ಷಪಾತ, ಜಾತಿಭೇಧ ಇಲ್ಲದೆ ಸರ್ವರನ್ನು ಸಮಾನವಾಗಿ ಕಂಡು ಧಾರ್ಮಿಕ ಕ್ಷೇತ್ರದ ಪಾವಿತ್ಯತೆಯನ್ನು ಕಾಪಾಡಿದ್ದೇನೆ ಎನ್ನುವ ಆತ್ಮಸಂತೃಪ್ತಿ ನನ್ನಲ್ಲಿದೆ ಈ ಕಾರ್ಯಕ್ಕೆ ಸಹಕರಿಸಿದ ಅರ್ಚಕ ವೃಂದ, ಊರ ಪರವೂರ ಭಕ್ತಾಧಿಗಳು ಹಾಗೂ ಧಾರ್ಮಿಕ ಇಲಾಖೆಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.
ಪ್ರಸ್ತುತ ನೂತನ ವ್ಯವಸ್ಥಾಪನಾ ಸಮಿತಿಯನ್ನು ಜಿಲ್ಲಾ ಧಾರ್ಮಿಕ ಪರಿಷತ್ ಮೂಲಕ ಆಯ್ಕೆ ಮಾಡಲಾಗಿದೆ. ನನ್ನನೂ ಸದಸ್ಯರನ್ನಾಗಿ ಆಯ್ಕೆ ಮಾಡಿರುತ್ತಿರಿ. ಆದರೆ ಈ ಸಮಿತಿಯಲ್ಲಿ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಮತ್ತು ಊರವರು ದೂರು ನೀಡಿದಂತೆ ದೇವಸ್ಥಾನದ ಆಸ್ತಿಯನ್ನು (ಜಾಗವನ್ನು) ಕಬಳಿಸಿ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡ ವ್ಯಕ್ತಿಯನ್ನು ಪವಿತ್ರ ದೇವಸ್ಥಾನದ ವ್ಯವಸ್ಥೆಗಳನ್ನು ನೋಡುವ ಸಮಿತಿಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ ಹಲವಾರು ವರ್ಷಗಳಿಂದ ದೇವಸ್ಥಾನದ ಸಮಿತಿಯಲ್ಲಿ ಸೇವೆಯನ್ನು ಸಲ್ಲಿಸಿರುವವರನ್ನು ಕಡೆಗಣಿಸಲಾಗಿದೆ. ರಾಜಕೀಯ ಪ್ರೇರಿತವಾಗಿ ಸಮಿತಿಯನ್ನು ರಚಿಸಲಾಗಿದೆ. ಪವಿತ್ರ ದೇವಸ್ಥಾನಗಳಲ್ಲಿ ರಾಜಕೀಯದ ಲೇಪನ ಸಮಂಜಸವಲ್ಲದ ಕಾರಣ ಈ ಸಮಿತಿಯಲ್ಲಿ ಕಾರ್ಯ ನಿರ್ವಹಿಸಲು ನನ್ನ ಮನಸ್ಸು ಒಪ್ಪದ ಕಾರಣ ನನ್ನ ಸದಸ್ಯತನಕ್ಕೆ ರಾಜಿನಾಮೆಯನ್ನು ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣದ ಹಿನ್ನಲೆ ಏನು?
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸೇರಬೇಕಾದ ಜಾಗದ ದಾಖಲೆಗಳನ್ನು ದೇವಸ್ಥಾನದ ಹೆಸರಿಗೆ ವರ್ಗಾವಣೆಯಾಗಿಲ್ಲ ಎನ್ನುವ ಕುರಿತ ವಿವಾದವೇ ರಾಜೀನಾಮೆ ಪ್ರಕರಣಕ್ಕೆ ಮೂಲ ಕಾರಣವಾಗಿದೆ.ಕಳೆದ 2018ರಲ್ಲಿ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ದೇವಸ್ಥಾನದ ಅಕ್ಕಪಕ್ಕದಲ್ಲಿರುವ ಸ.ನಂ 18/12 ಹಾಗೂ 51/1ಪಿ2 ರಲ್ಲಿನ 2.20 ಎಕರೆ ಜಾಗವನ್ನು ಕಳೆದ 2018ರಲ್ಲಿ ದೇವಸ್ಥಾನದ ಹೆಸರಿನಲ್ಲಿ ಖರೀದಿಸುವ ನಿರ್ಧಾರಕ್ಕೆ ಬರಲಾಗಿತ್ತು. ಜಾಗದ ಮೂಲ ಮಾಲೀಕರ ಹೆಸರಿನಲ್ಲಿದ್ದ ಬ್ಯಾಂಕ್ ಅಡಮಾನ ಸಾಲವನ್ನು ಕಟ್ಟಿ ಜಾಗ ಖರೀದಿಸುವ ಸಲುವಾಗಿ ಗ್ರಾಮಸ್ಥರು ಹಾಗೂ ಭಕ್ತಾಧಿಗಳಿಂದ ಸುಮಾರು 4 ಲಕ್ಷ ಹಣ ಸಂಗ್ರಹವಾಗಿತ್ತು. ಆದರೆ ಕೃಷಿ ಜಮೀನು ದೇವಸ್ಥಾನಗಳಿಗೆ ಹಕ್ಕು ಬದಲಾವಣೆ ಮಾಡಲು ಕಾನೂನು ತೊಡಕುಗಳು ಇದ್ದ ಕಾರಣದಿಂದ ದೇವಸ್ಥಾನದ ಆಡಳಿತಾಧಿಕಾರಿಗಳು ಹಾಗೂ ಗ್ರಾಮಸ್ಥರು ಸೇರಿ ತಾತ್ಕಾಲಿಕವಾಗಿ ಪ್ರಕಾಶ ಶೆಟ್ಟಿಯವರ(ಬಾಲು) ಹೆಸರಿನಲ್ಲಿ ದೇವಸ್ಥಾನದ ಜಾಗ ನೊಂದಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು.ದೇವಸ್ಥಾನದಲ್ಲಿ ಸಂಗ್ರಹವಾದ ಹಣದಿಂದ ಜಾಗದ ಮೇಲಿನ ಬ್ಯಾಂಕ್ ಸಾಲವನ್ನು ಕಟ್ಟಿ ಜಾಗವನ್ನು ತಾತ್ಕಾಲಿಕವಾಗಿ ಪ್ರಕಾಶ್ ಶೆಟ್ಟಿಯವರ(ಬಾಲು) ಹೆಸರಿಗೆ ನೋಂದಣಿ ಮಾಡಲಾಗಿತ್ತು. ಇದಾದ ಬಳಿಕ ದೇವಸ್ಥಾನಗಳಿಗೆ ಕೃಷಿ ಜಮೀನು ಕೂಡ ಪರಭಾರೆ ಮಾಡಬಹುದೆಂದು ಸರ್ಕಾರವು ಕಾನೂನು ರೂಪಿಸಿದ ಹಿನ್ನಲೆಯಲ್ಲಿ ಅಂದಿನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿದ್ದ ಶಿವರಾಮ ಶೆಟ್ಟಿಯವರು ಪ್ರಕಾಶ್ ಶೆಟ್ಟಿಯವರ ಬಳಿಯಿದ್ದ ದೇವಸ್ಥಾನದ ಜಾಗವನ್ನು ದೇವಸ್ಥಾನದ ಹೆಸರಿಗೆ ಹಕ್ಕು ವರ್ಗಾವಣೆ ಮಾಡುವಂತೆ ಹಲವು ಬಾರಿ ಕೇಳಿಕೊಂಡಿದ್ದರೂ ಅವರು ಇದಕ್ಕೆ ಒಪ್ಪಿರಲಿಲ್ಲ ಎಂದು ಶಿವರಾಮ ಶೆಟ್ಟಿ ಆರೋಪಿಸಿದ್ದಾರೆ. ದೇವಸ್ಥಾನದ ವಾರ್ಷಿಕ ರಥೋತ್ಸವದ ಸಂದರ್ಭದ ದೈವಗಳ ಕೋಲದ ಸಂದರ್ಭದಲ್ಲೂ ಜಾಗದ ದಾಖಲೆ ವರ್ಗಾವಣೆಯ ಚರ್ಚೆ ಮುನ್ನಲೆಗೆ ಬರುತ್ತಿತ್ತು. ಈ ವಿವಾದದ ಕುರಿತ ಜಟಾಪಟಿಯು ಈ ಹಿಂದಿನ ಆಡಳಿತ ಮಂಡಳಿಯ ಅವಧಿಯ ವರೆಗೂ ಮುಂದುವರಿದಿತ್ತು.
ನೂತನ ವ್ಯವಸ್ಥಾಪನ ಸಮಿತಿಗೆ ಸದಸ್ಯರ ನೇಮಕಕ್ಕೆ ಜಿಲ್ಲಾ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರು ಅರ್ಜಿ ಆಹ್ವಾನಿಸಿದ್ದರು. ಈ ಸಮಿತಿಗೆ ಪ್ರಕಾಶ್ ಶೆಟ್ಟಿ ಹಾಗೂ ಶಿವರಾಮ ಶೆಟ್ಟಿ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದರು. ವ್ಯವಸ್ಥಾಪನ ಸಮಿತಿಗೆ ಶಿವರಾಮ ಶೆಟ್ಟಿ ಹಾಗೂ ಪ್ರಕಾಶ ಶೆಟ್ಟಿಯವರು ಸೇರಿ 9 ಸದಸ್ಯರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದರು.ಆದರೆ ಪ್ರಕಾಶ್ ಶೆಟ್ಟಿಯವರು ದೇವಸ್ಥಾನದ ಜಾಗವನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಶಿವರಾಮ ಶೆಟ್ಟಿ ಹಾಗೂ ಮತ್ತಿತರರು ಅವರನ್ನು ಸಮಿತಿಗೆ ಸೇರ್ಪಡೆಗೊಳಿಸದಂತೆ ಧಾರ್ಮಿಕ ಪರಿಷತ್ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣಾ ಪತ್ರ ನೀಡಿದ್ದರು. ಆದರೆ ವಿರೋಧದ ನಡುವೆಯೂ ಪ್ರಕಾಶ್ ಶೆಟ್ಟಿಯವರನ್ನು ಸಮಿತಿಗೆ ಸೇರ್ಪಡೆಯಾಗಿರುವ ಕಾರಣದಿಂದ ತಾನು ರಾಜೀನಾಮೆ ನೀಡುತ್ತಿರುವುದಾಗಿ ಶಿವರಾಮ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.