ಕಾರ್ಕಳ: ಸ್ಟೇಷನರಿ ಮತ್ತು ಪುಸ್ತಕ ಅಂಗಡಿಯನ್ನು ತೆರೆಯಲು ಕೊಟೇಶನ್ ನೀಡಿ ಬ್ಯಾಂಕಿನಿಂದ ಸಾಲದ ಹಣವನ್ನು ಪಡೆದು ಸ್ಟೇಷನರಿ ವಸ್ತುಗಳನ್ನು ನೀಡದೇ ವಂಚನೆ ಎಸಗಿರುವ ಘಟನೆ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆಯಲ್ಲಿ ನಡೆದಿದೆ. ಕೌಡೂರು ನಿವಾಸಿ ಕವಿತಾ ಕೃಪಾಲಿನಿ ಮೋಸಹೋದ ಮಹಿಳೆ.
ಕವಿತಾ ಕೃಪಾಲಿನಿ ಅವರು ರಂಗನಪಲ್ಕೆಯಲ್ಲಿ ಸ್ಟೇಷನರಿ ಮತ್ತು ಪುಸ್ತಕ ಅಂಗಡಿಯನ್ನು ತೆರೆಯಲು ಜೆರಾಕ್ಸ್ ಮೆಷೀನ್, ಲ್ಯಾಮಿನೇಷನ್ ಮೆಷೀನ್, ಲ್ಯಾಪ್ ಟಾಪ್ ಅನ್ನು ಖರೀದಿಸುವ ಸಲುವಾಗಿ ಪ್ರಧಾನ ಮಂತ್ರಿ ಸ್ವದ್ಯೋಗ ಯೋಜನೆಯಲ್ಲಿ ಸಾಲ ಪಡೆಯಲು ಕೆನರಾ ಬ್ಯಾಂಕ್ ಕಣಜಾರು ಶಾಖೆ ಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಲಕ್ಷ್ಮೀ ಎಂಟರ್‌ಪ್ರೈಸರ್ಸ್ ಮಾಲಿಕ ಸಾಮಾಗ್ರಿ ಖರೀದಿಸುವ ಕೊಟೇಶನ್ ನೀಡಿ ಆ ಮೂಲಕ ಸಾಲ ತೆಗೆಸಿಕೊಡುವುದಾಗಿ ಕವಿತಾ ಅವರನ್ನು ನಂಬಿಸಿ ಸಾಲವೂ ಮಂಜೂರಾಗಿತ್ತು. ಅದರಲ್ಲಿ 2024ರ ಡಿಸೆಂಬರ್ 18 ರಂದು ಕೆನರಾ ಬ್ಯಾಂಕ್ ಶಾಖೆಯಿಂದ ಸಾಲದ ಹಣ 9,00,000 ರೂ. ಹಾಗೂ ಕವಿತಾ ಅವರ ಖಾತೆಯಿಂದ 50,000 ನಗದನ್ನು ಲಕ್ಷ್ಮಿ ಎಂಟರ್‌ಪ್ರೈಸರ್ಸ್ ಖಾತೆಗೆ ವರ್ಗಾಯಿಸಿಕೊಳ್ಳಲಾಗಿತ್ತು. ಆದರೆ ಆರೋಪಿಯು ಕವಿತಾ ಅವರಿಗೆ ಯಾವುದೇ ಸ್ಟೇಷನರಿ ಸಾಮಗ್ರಿಗಳನ್ನು ನೀಡಿರಲಿಲ್ಲ.
ಬ್ಯಾಂಕಿನವರು ಆರೋಪಿ ಹಾಗೂ ಕವಿತಾ ರಲ್ಲಿ ಬ್ಯಾಂಕಿನಿಂದ ತೆಗೆದ ಸಾಲವನ್ನು ಮರುಪಾವತಿ ಮಾಡುವಂತೆ ಹೇಳಿದಾಗ ಆರೋಪಿಯು ಫೆ 21 ರಂದು 2 ಲಕ್ಷ ರೂ. ಹಣವನ್ನು ಬ್ಯಾಂಕ್ ಖಾತೆಗೆ ಹಾಕಿದ್ದು, ಉಳಿದ ಹಣವನ್ನು ಹಾಗೂ ಕೊಟೇಶನ್‌ನಲ್ಲಿದ್ದ ಸಾಮಾಗ್ರಿಗಳನ್ನು ನೀಡದೇ ವಂಚನೆ ಎಸಗಿದ್ದಾರೆ ಎಂದು ಕವಿತಾ ದೂರು ನೀಡಿದ್ದು, ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ