ಕಾರ್ಕಳ : ಅಜೆಕಾರು ಶ್ರೀರಾಮ ಭಜನಾ ಮಂಡಳಿಯ ಸುವರ್ಣ ಮಹೋತ್ಸವ ಹಾಗೂ ಶ್ರೀ ರಾಮ ಮಂದಿರದ ರಜತ ಮಹೋತ್ಸವದ ಶುಭ ಸಂದರ್ಭದಲ್ಲಿ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಸ್ವಾಮೀಜಿಯವರು ಭೇಟಿ ನೀಡಿದರು.
ದೀಪ ಪ್ರಜ್ವಲನೆ ನೆರವೇರಿಸಿದ ಸ್ವಾಮೀಜಿಯವರು, ದಿನನಿತ್ಯ ದೇವರ ಭಜನೆ, ನಾಮಸ್ಮರಣೆ, ಪೂಜೆ ಹಾಗೂ ದೇವಸ್ಥಾನದ ಪ್ರತಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಲ್ಲದೆ ತಮ್ಮ ಮಕ್ಕಳಿಗೂ ಪ್ರೇರೇಪಿಸಬೇಕು ಇದರಿಂದ ದೇವರು ಸದಾಕಾಲ ನಿಮ್ಮೊಂದಿಗೆ ಇರುವುದರಲ್ಲಿ ಸಂಶಯವಿಲ್ಲ. ” *ನಿಶ್ಕಲ್ಮಶ ಭಕ್ತಿಯಿಂದ ಭಜಿಸಿದ ಭಕ್ತನ ಸಂಪೂರ್ಣ ಹೊಣೆ ಭಗವಂತನದ್ದಾಗಿರುತ್ತದೆ”* . ಮನುಜರು ಶಾಶ್ವತರಲ್ಲದಿದ್ದರೂ ಇಂತಹ ಮಂದಿರ, ದೇವಸ್ಥಾನಗಳು ಶಾಶ್ವತವಾಗಿ ಉಳಿಯುತ್ತವೆ. ಹಾಗಾಗಿ ಈ ಹಿಂದೆ ನಡೆದು ಬಂದ ಹಾಗೆ ಭಜನೆ, ಪೂಜೆ ಇತ್ಯಾದಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಆಶೀರ್ವಚಿಸಿ ಎಲ್ಲಾ ಭಕ್ತವೃಂದಕ್ಕೆಪ್ರಸಾದ ರೂಪದಲ್ಲಿ ಫಲಮಂತ್ರಾಕ್ಷತೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಕಳ ರಾಘವ ಜಪ ಕೇಂದ್ರದ ವೈದಿಕ ವಿಘ್ನೇಶ್ ಭಟ್ ಅವರ ನೇತೃತ್ವದಲ್ಲಿ ಸುಮಾರು 2 ಲಕ್ಷ ಶ್ರೀ ರಾಮನಾಮ ಜಪವನ್ನು ಸಾಮೂಹಿಕವಾಗಿ ಪಠಿಸಲಾಯಿತು.
ಸ್ವಾಮೀಜಿಯವರಿಗೆ ಭವ್ಯ ಮೆರವಣಿಗೆಯಲ್ಲಿ ಪೂರ್ಣ ಕುಂಭ ಹಾಗೂ ವಾದ್ಯ ವೈವಿಧ್ಯಗಳೊಂದಿಗೆ ಸ್ವಾಗತಿಸಲಾಯಿತು. ಅರ್ಚಕರಾದ ವಿಜೇಂದ್ರ ಭಟ್ ಹಾಗೂ ಸುಹಾಸ್ ಭಟ್ ಮುನಿಯಾಲು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಶ್ರೀ ಸ್ವಾಮೀಜಿಯವರಿಗೆ ಹತ್ತು ಸಮಸ್ತರ ಪರವಾಗಿ ರಜತ -ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಉಮಾನಾಥ ಪೈ ಹಾಗೂ ರಾಮಮಂದಿರ ಟ್ರಸ್ಟಿನ ಅಧ್ಯಕ್ಷ ಪ್ರೇಮಾನಂದ ಶೆಣೈ ಪಾದಪೂಜೆ ನೆರವೇರಿಸಿದರು.
ಟ್ರಸ್ಟಿನ ಸ್ಥಾಪಕ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, ಮಾಜಿ ಅಧ್ಯಕ್ಷರಾದ ವಿಠಲ ಶೆಣೈ, ರಾಮನಾಥ ಶೆಣೈ, ಟ್ರಸ್ಟ್ ನ ಕಾರ್ಯದರ್ಶಿ ಉಮೇಶ್ ಹೆಗ್ಡೆ ಹಾಗೂ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಸತ್ಯೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.