ಹೆಬ್ರಿ: ವಯೋವೃದ್ಧ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಏಕಾಎಕಿ ಟೇಬಲ್ ಮೇಲಿದ್ದ ಮೊಬೈಲ್ ಹಾಗೂ ವೃದ್ಧೆಯ ಕುತ್ತಿಗೆಯಲ್ಲಿದ್ದ 40 ಗ್ರಾಂ ಚಿನ್ನಾಭರಣ ದೋಚಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದಾರೆ.
ಹೆಬ್ರಿ ತಾಲೂಕಿನ ಶಿವಪುರ ಎಂಬಲ್ಲಿ ಈ ಘಟನೆ ನಡೆದಿದ್ದು ಸುಲಾವತಿ (78)ಎಂಬವರು ಮನೆಯಲ್ಲಿ ಒಬ್ಬರೇ ವಾಸವಿದ್ದು, ಖತರ್ನಾಕ್ ಜೋಡಿಯೊಂದು ಇದನ್ನೇ ಬಂಡವಾಳವನ್ನಾಗಿಸಿ ಫೆ.21ರಂದು ಬುಧವಾರ ದರೋಡೆಗೆ ಸ್ಕೆಚ್ ಹಾಕಿತ್ತು. ಪಕ್ಕದ ಮನೆಯ ಗೋಪಾಲ ಹಾಗೂ ಮಂಜುಳಾ ಎಂಬವರು ಹಾಡುಹಗಲೇ ಒಂಟಿ ವೃದ್ಧೆಯ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ಪೈಕಿ ಗೋಪಾಲ ಎಂಬಾತ ಟೇಬಲ್ ಮೇಲಿಟ್ಟಿದ್ದ ಮೊಬೈಲ್ ವೃದ್ಧೆಯ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಎಗರಿಸಿ ಓಡಲೆತ್ನಿಸಿದಾಗ ಮಂಜುಳಾ ವೃದ್ಧೆ ಸುಲಾವತಿಯವರ ಕೈಬಳೆಗಳನ್ನು ಕಸಿಯಲು ಯತ್ನಿಸಿದಾಗ ವೃದ್ಧೆ ಸುಲಾವತಿ ಬೊಬ್ಬೆ ಹೊಡೆಯುವಾಗ ಅಕ್ಕಪಕ್ಕದವರು ಓಡಿ ಬಂದಾಗ ಆರೋಪಿಗಳು ಪರಾರಿಯಾಗಿದ್ದಾರೆ. ಮನೆಯಲ್ಲಿ ಒಂಟಿ ಮಹಿಳೆಯನ್ನೇ ಟಾರ್ಗೆಟ್ ಮಾಡಿದ ಈ ಜೋಡಿಯ ಪತ್ತೆಗೆ ಪೊಲೀಸರು ಮುಂದಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.