ಬೆಂಗಳೂರು: ಕರ್ನಾಟಕದಲ್ಲಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅನ್ನು ಅಳವಡಿಸದವರಿಗೆ ಶುಭ ಸುದ್ದಿಯೊಂದು ದೊರೆತಿದ್ದು, ಹೈಕೋರ್ಟ್ನಿಂದ ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಣೆಯಾಗಿದೆ. ಗಡುವು ವಿಸ್ತರಿಸಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ವಿಚಾರಣೆಯನ್ನು ಮುಂದೂಡಿದೆ. ಜತೆಗೆ, ಗಡುವು ಕೂಡ ವಿಸ್ತರಣೆಯಾಗಿದೆ.
ನ್ಯಾಯಮೂರ್ತಿಗಳಾದ ಕೆ ಕಾಮೇಶ್ವರ ರಾವ್ ಮತ್ತು ಕೆ ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ನವೆಂಬರ್ 20ಕ್ಕೆ ಮುಂದಿನ ವಿಚಾರಣೆ ಮುಂದೂಡಿಕೆ ಮಾಡಿದೆ. ಜತೆಗೆ, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ದಿನಾಂಕವನ್ನೂ ವಿಸ್ತರಣೆ ಮಾಡಿ ಆದೇಶ ಪ್ರಕಟಿಸಿದೆ.
ಈ ಹಿಂದೆ ಸಾರಿಗೆ ಹೊರಡಿಸಿದ್ದ ಸುತ್ತೋಲೆ ಪ್ರಕಾರ, ಸೆಪ್ಟೆಂಬರ್ 15ಕ್ಕೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಕೊನೆಯ ದಿನವಾಗಿತ್ತು.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯ ಗಡುವು ಒಟ್ಟು ಮೂರು ಬಾರಿ ವಿಸ್ತರಣೆಯಾಗಿತ್ತು. 2019ರ ಏಪ್ರಿಲ್ 1 ರ ಮೊದಲು ನೋಂದಾಯಿಸಲ್ಪಟ್ಟ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸುವ ಅಧಿಸೂಚನೆಯನ್ನು 2023ರ ಆಗಸ್ಟ್ನಲ್ಲಿ ಸಾರಿಗೆ ಇಲಾಖೆ ಪ್ರಕಟಿಸಿತ್ತು. ಮೊದಲಿಗೆ 2023 ರ ನವೆಂಬರ್ 17 ರ ಗಡುವನ್ನು ನಿಗದಿಪಡಿಸಲಾಗಿತ್ತು. ನಿಧಾನಗತಿಯ ಅಳವಡಿಕೆಯ ಕಾರಣ ಆ ನಂತರದಲ್ಲಿ ಗಡುವನ್ನು ಮೂರು ಬಾರಿ ವಿಸ್ತರಿಸಲಾಗಿತ್ತು. ಇದೀಗ ಹೈಕೋರ್ಟ್ ಆದೇಶದ ನಂತರ 4ನೇ ಬಾರಿ ಗಡುವು ವಿಸ್ತರಣೆ ಮಾಡಿದಂತಾಗಿದೆ.
in