ಉಡುಪಿ: ಮಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ತುಳು ಭಾಷೆ ಇದೀಗ ಯೂನಿಕೋಡ್ ನಲ್ಲಿ ಸೇರ್ಪಡೆಗೊಳಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ. . ಇದೀಗ ಯೂನಿಕೋಡ್ ನ 16ನೇ ಆವೃತ್ತಿಯಾಗಿ ತುಳು ಲಿಪಿ ಸೇರ್ಪಡೆಯಾಗಿದ್ದು ಇದರಲ್ಲಿ 80 ಅಕ್ಷರಗಳನ್ನು ಸೇರ್ಪಡೆಗೊಳಿಸಲಾಗಿದೆ. ಇದು ಪ್ರಪಂಚದಾಂದ್ಯಂತ ಇರುವ ತುಳುವರ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ.
ತುಳು ಲಿಪಿಗಿರುವ ಇನ್ನೊಂದು ಹೆಸರಿನ ಮೂಲಕ ತುಳು ತಿಗಳಾರಿ ಎಂಬುದಾಗಿ ಯುನಿಕೋಡ್ ಅಂಗೀಕರಿಸಿದ್ದು, ಇನ್ನು ಮುಂದೆ ತುಳುಲಿಪಿಯಲ್ಲಿಯೇ ಪಠ್ಯಗಳನ್ನು ಓದಬಹುದಾಗಿದೆ. ಸಾಮಾನ್ಯವಾಗಿ ಇಂಗ್ಲಿಷ್, ಕನ್ನಡ ಸೇರಿದಂತೆ ಬೇರೆ ಯಾವ ಭಾಷೆಯಲ್ಲಿ ಶಬ್ದಗಳನ್ನು ಬರೆದರೆ, ಅದನ್ನು ತುಳುವಿನಲ್ಲಿ ಅನುವಾದಿಸುವ ಕೆಲಸವನ್ನು ಈ ಗೂಗಲ್ ಮಾಡುತ್ತದೆ. ಇದೀಗ ತುಳು ಲಿಪಿಯದ್ದೇ ಅಧಿಕೃತ ಫಾಂಟ್ ಕೀಲಿಮಣೆಯಲ್ಲಿ ಲಭ್ಯವಿದ್ದು, ಹೀಗಾಗಿ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇನ್ನಿತ್ತರ ಡಿಜಿಟಲ್ ವ್ಯವಸ್ಥೆಯಲ್ಲಿ ತುಳುಲಿಪಿಯನ್ನು ಓದುವ ಅವಕಾಶವೊಂದು ದೊರೆತಿದೆ.
ತುಳು ಲಿಪಿಯನ್ನು ಯುನಿಕೋಡ್ ಆಗಿ ಅಂಗೀಕರಿಸುವ ನಿಟ್ಟಿನಲ್ಲಿ ತಜ್ಞರಾದ ಕೆ.ಪಿ. ರಾವ್, ಯು.ಬಿ.ಪವನಜ, ವೈಷ್ಣವಿ ಮೂರ್ತಿ, ಎಸ್.ಎ.ಕೃಷ್ಣಯ್ಯ, ರಾಧಕೃಷ್ಣ ಬೆಳ್ಳೂರು, ಭಾಸ್ಕರ್ ಶೇರಿಗಾರ್, ಎಸ್.ಆರ್. ವಿಘ್ನರಾಜ್, ಆಕಾಶ್ ರಾಜ್ ಸೇರಿದಂತೆ ಅನೇಕರು ಕೊಡುಗೆಗಳನ್ನು ನೀಡಿದ್ದಾರೆ. ತುಳು ವಿಕಿಪೀಡಿಯಕ್ಕಾಗಿ ಶ್ರಮಿಸಿದ್ದ ವಿಶ್ವ ಕನ್ನಡ ಸಂಪಾದಕ ಯು.ಬಿ. ಪವನಜ, ‘ಯುನಿಕೋಡ್ ಆವೃತ್ತಿ 16 ರಲ್ಲಿ ತುಳು ಸೇರ್ಪಡೆಯಾಗಿದೆ. ಒಟ್ಟು 80 ಅಕ್ಷರಗಳನ್ನು ಸೇರಿಸಿದ್ದಾರೆ’ ಎಂದು ಹೇಳಿದ್ದಾರೆ.