ಬೆಂಗಳೂರು: ಕರ್ನಾಟಕದಾದ್ಯಂತ ಅನಧಿಕೃವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರ ಪತ್ತೆಗೆ ಸರ್ಕಾರ ಚಿಂತನೆ ನಡೆಸಿದ್ದು, ಖಾಸಗಿ ಸಂಸ್ಥೆ ಕಡೆಯಿಂದ ಸರ್ವೆ ನಡೆಸಲು ಮುಂದಾಗಿದೆ.
ಪ್ರಸ್ತುತ ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್ ಎಫ್‌ಎಸ್‌ಎ) ಪ್ರಕಾರ, ರಾಜ್ಯದಲ್ಲಿ 1.03 ಕೋಟಿ ಬಿಪಿಎಲ್ ಕಾರ್ಡ್ ಗಳು ಇರಬೇಕು. ಆದರೆ. ಸದ್ಯ ಕರ್ನಾಟಕದಲ್ಲಿ 1.16 ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡ್ಗಳ ವಿತರಣೆಯಾಗಿದೆ. ನಿಯಮಕ್ಕಿಂತ 14 ಲಕ್ಷ ಹೆಚ್ಚುವರಿ ಕಾರ್ಡ್ಗಳು ಇವೆ. ದಿನದಿಂದ ದಿನಕ್ಕೆ ಅನಧಿಕೃತ ಕಾರ್ಡ್ ದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಸರ್ವೆ ನಡೆಸಲು ಖಾಸಗಿ ಕಂಪನಿಯೊಂದಕ್ಕೆ ಆಹಾರ ಇಲಾಖೆಯು ಜವಾಬ್ದಾರಿವಹಿಸಿದೆ ಎನ್ನಲಾಗಿದೆ.
ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಗಳ ಪ್ರಯೋಜನವನ್ನು ಅರ್ಹರಿಗಿಂತ ಇತರರೆ ಹೆಚ್ಚು ಪಡೆಯುತ್ತಿದ್ದಾರೆ ಎಂಬ ಆರೋಪಗಳು ಹೇಳಿಬಂದಿವೆ. ಇದಕ್ಕೆ ಪೂರಕವೆಂಬಂತೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಡಿಬಿಟಿ ಮೂಲಕ ಹಣ ನೀಡುವುದನ್ನು ರಾಜ್ಯ ಸರ್ಕಾರ ಆರಂಭಿಸುವುದಕ್ಕೂ ಮೊದಲು ನ್ಯಾಯಬೆಲೆ ಅಂಗಡಿಯಲ್ಲಿ ಅನೇಕ ಕುಟುಂಬಗಳು ಪ್ರತಿ ತಿಂಗಳು ಅಕ್ಕಿ ಪಡೆಯುತ್ತಿರಲಿಲ್ಲ. ಯಾವಾಗ ಮೂರು ತಿಂಗಳು ಅಕ್ಕಿ ಪಡೆಯದ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡುವ ಎಚ್ಚರಿಕೆಯನ್ನು ಸರ್ಕಾರ ನೀಡಿದ ಕೂಡಲೇ ಪ್ರತಿ ಕಾರ್ಡುದಾರರು ಅಕ್ಕಿಗಾಗಿ ನ್ಯಾಯಬೆಲೆ ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲಲು ಶುರು ಮಾಡಿದ್ದಾರೆ. ಹಾಗಾಗಿ, ಅರ್ಹರಿಗಿಂತ ಇತರರೇ ಹೆಚ್ಚಾಗಿ ಅಕ್ಕಿ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅರ್ಹರಿಗೆ ಮಾತ್ರ ಫಲ ಸಿಗಬೇಕೆಂಬ ಉದ್ದೇಶದಿಂದ ಅರ್ಹರ ಹುಡುಕಾಟಕ್ಕೆಂದು ಆಹಾರ ಇಲಾಖೆ ಖಾಸಗಿ ಸಂಸ್ಥೆಯೊಂದಕ್ಕೆ ಜವಾಬ್ದಾರಿ ವಹಿಸಿದೆ.
ಬಿಪಿಎಲ್ ಕಾರ್ಡ್ ಹೊಂದಿರುವವರು ಆಗಸ್ಟ್ 31 ರೊಳಗೆ ಇ-ಕೆವೈಸಿ ಮಾಡಿಸಲು ಆಹಾರ ಇಲಾಖೆ ಸೂಚನೆ ನೀಡಿತ್ತು. ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಪಡಿತರ ಚೀಟಿದಾರರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ (ಆಧಾರ್ ಆಧರಿತ ಹೆಬ್ಬೆಟ್ಟಿನ ದೃಢೀಕರಣ) ಮಾಡಿಸುವುದು ಕೇಂದ್ರ ಸರಕಾರದ ಮಾರ್ಗಸೂಚಿಯನ್ವಯ ಕಡ್ಡಾಯವಾಗಿರುತ್ತದೆ. ಯಾರು ಕಳೆದ ಹಲವು ವರ್ಷಗಳಿಂದ ತಮ್ಮ ಬಿಪಿಎಲ್ ಪಡಿತರ ಚೀಟಿಗೆ ಈವರೆಗೆ ಕೆ-ವೈಸಿ ಮಾಡಿಸಿರುವುದಿಲ್ಲವೋ ಅಂತಹ ಕುಟುಂಬಗಳ ಪಟ್ಟಿಯನ್ನು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿಈಗಾಗಲೇ ಪ್ರದರ್ಶಿಸಲಾಗಿದೆ. ಶೀಘ್ರದಲ್ಲಿಯೇ ಅಂತಹವರ ಹೆಸರನ್ನು ಬಿಪಿಎಲ್ ಪಡಿತರ ಚೀಟಿಯಿಂದ ತೆಗೆದು ಹಾಕಲು ಕ್ರಮವಹಿಸಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ.