Share this news

 

 

 

 

ಕಾರ್ಕಳ, ಅ.31:ರಾಜ್ಯದಲ್ಲಿ ಈಗಾಗಲೇ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ನಡೆಯದೇ 5 ವರ್ಷಗಳಾಗಿವೆ.ಕ್ಷೇತ್ರ ಪುನರ್ ವಿಂಗಡಣೆ ಮೀಸಲಾತಿ ಕಾರಣಕ್ಕೆ ಚುನಾವಣೆಗಳನ್ನು ಮುಂದೂಡುತ್ತಾ ಬರಲಾಗುತ್ತಿದೆ.ಹೈಕೋರ್ಟ್ ಹಲವು ಬಾರಿ ಛೀಮಾರಿ ಹಾಕಿದರೂ ಎಚ್ಚೆತ್ತುಕೊಳ್ಳದ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕಡೆಗಣಿಸಿದೆ ಎಂದು ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಬೆಂಗಳೂರು ಇದರ ಆಡಳಿತ ಮಂಡಳಿ ಸದಸ್ಯರಾದಸಾಣೂರು ನರಸಿಂಹ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಗಳಲ್ಲಿ ಆಡಳಿತಾಧಿಕಾರಿಗಳ ನೇಮಕದಿಂದ ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ.ಇದೇ ಪರಿಸ್ಥಿತಿ ರಾಜ್ಯದ ಎಲ್ಲಾಗ್ರಾಮ ಪಂಚಾಯತ್ ಗಳಿಗೂ ಬರುವ ಸಾಧ್ಯತೆ ಇದೆ. ಈ ಹಿಂದೆ ಚುನಾವಣಾ ಆಯೋಗವೇ ಸ್ಥಳೀಯ ಸಂಸ್ಥೆಗಳ ಕ್ಷೇತ್ರವಾರು ಮೀಸಲಾತಿ ನಿಗದಿ ಪಡಿಸುತ್ತಿತ್ತು. ಆದರೆ 2020 ರಲ್ಲಿ ಪಂಚಾಯತ್ ರಾಜ್ ಕಾಯ್ದೆಗೆ ತಂದ ತಿದ್ದುಪಡಿ ಪ್ರಕಾರ ಮೀಸಲಾತಿ ನಿಗದಿ ಪಡಿಸುವ ರಾಜ್ಯ ಚುನಾವಣಾ ಆಯೋಗದ ಅಧಿಕಾರವನ್ನು ಮೊಟಕುಗೊಳಿಸಿ ರಾಜ್ಯ ಸರಕಾರವೇ ನಿಗದಿಪಡಿಸಬೇಕಾಗಿದೆ.

ಈ ವರ್ಷದ ಅಕ್ಟೋಬರ್ ಅಂತ್ಯಕ್ಕೆ ಗ್ರಾಮ ಪಂಚಾಯತ್ ಗಳ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿ ರಾಜ್ಯ ಸರಕಾರವೇ ಚುನಾವಣಾ ಆಯೋಗಕ್ಕೆ ನೀಡಬೇಕು. ಆದರೆ ಸರಕಾರದ ಮಟ್ಟದಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಅವಧಿ ಈ ವರ್ಷಾಂತ್ಯಕ್ಕೆ ಮುಗಿಯಲಿದ್ದು ಡಿಸೆಂಬರ್ ಅಥವಾ ಜನವರಿ ಒಳಗಡೆ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕು.
ಸರಕಾರದ ಈಗಿನ ಧೋರಣೆ ಗಮನಿಸಿದರೆ ನಿಗದಿತ ಅವಧಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳನ್ನು ನಡೆಸುವ ಇಚ್ಛಾ ಶಕ್ತಿಯನ್ನು ತೋರಿಸದೆ ಉದಾಸೀನ ಪ್ರವೃತ್ತಿಯನ್ನು ತೋರುತ್ತಿದೆ. ಸರ್ಕಾರದ ಚುನಾವಣೆ ನಡೆಸದಿದ್ದಲ್ಲಿ ಗ್ರಾಮ ಪಂಚಾಯಿತಿಗಳಲ್ಲೂ ಆಡಳಿತಾಧಿಕಾರಿ ನೇಮಕ ಆಗುವ ಸಾಧ್ಯತೆಯಿದೆ.
ಈಗಾಗಲೇ ಕಳೆದ 5 ವರ್ಷಗಳಿಂದ ರಾಜ್ಯದ 31 ಜಿ.ಪಂ ಮತ್ತು 219 ತಾ.ಪಂ ಗಳಲ್ಲಿ ಚುನಾಯಿತ ಪ್ರತಿನಿಧಿಗಳೇ ಇಲ್ಲದೇ ಕೇವಲ ಅಧಿಕಾರಿಗಳ ಕಾರುಬಾರು ನಡೆಯುತ್ತಿದೆ. ರಾಜ್ಯದ 5900 ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಯದೆ ಆಡಳಿತಾಧಿಕಾರಿಗಳ ನೇಮಕವಾದರೆ ಗ್ರಾಮೀಣ ಭಾಗದಲ್ಲಿ ಆಡಳಿತ ವ್ಯವಸ್ಥೆ ಅಧಿಕಾರಗಳ ಕೈಗೆ ಹೋಗಿ ಪ್ರಜಾಪ್ರಭುತ್ವ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡ ಮೇಲು ಮಾಡಿದ ಅಪಖ್ಯಾತಿಗೆ ರಾಜ್ಯ ಸರಕಾರ ಸಿಲುಕಲಿದೆ.

ರಾಜ್ಯ ಸರಕಾರದ ಈ ಪ್ರಜಾತಂತ್ರ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ವಿರೋಧಿ ಧೋರಣೆಯ ವಿರುದ್ಧ ಎಲ್ಲಾ ಸ್ಥಳೀಯ ಆಡಳಿತ ಪ್ರತಿನಿಧಿಗಳು, ಜನಸಾಮಾನ್ಯರು ಅನಿವಾರ್ಯವಾಗಿ ಬೀದಿಗಿಳಿದು ತೀವ್ರ ಪ್ರತಿಭಟನೆ ಮಾಡಬೇಕಾದೀತೆಂದು ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಬೆಂಗಳೂರು ಇದರ ಆಡಳಿತ ಮಂಡಳಿ ಸದಸ್ಯರಾದ ಸಾಣೂರು ನರಸಿಂಹ ಕಾಮತ್ ಎಚ್ಚರಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *