
ಹೆಬ್ರಿ, ಏ.03: ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಹಿಂತಿರುಗಿದ ವೀರ ಯೋಧ ಹೆಬ್ರಿ ತಾಲೂಕಿನ ಆನಂದ ಕಬ್ಬಿನಾಲೆ ಅವರನ್ನು ಹುಟ್ಟೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮುನಿಯಾಲು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ತಾನು ಸೈನ್ಯಕ್ಕೆ ಸೇರಬೇಕೆಂದು ಕನಸು ಕಂಡಿದ್ದ ಆನಂದ ಅವರು 24 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.ದೇಶದ ಭದ್ರತೆಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟು,
ಪಾಕಿಸ್ತಾನದ ವಿರುದ್ಧದ ಯುದ್ಧ ತುಕಡಿಯನ್ನು ಮುನ್ನಡೆಸಲು ಎಲ್ಲಾ ಉಪಕರಣಗಳೊಂದಿಗೆ ಸಜ್ಜಾಗಿ ಪಠಾಣ್ ಕೋಟ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರ ಧೈರ್ಯ ಮತ್ತು ತ್ಯಾಗ ಅಪಾರ.

ಅಭಿನಂದನಾ ಸಮಾರಂಭ:
ಹೆಮ್ಮೆಯ ಯೋಧ “ಆನಂದ ಕಬ್ಬಿನಾಲೆ” ಅವರನ್ನು ಮುನಿಯಾಲು ಪೇಟೆಯಲ್ಲಿ ಮುನಿಯಾಲು ಕ್ರೀಡಾ ಸಾಂಸ್ಕೃತಿಕ ಸಂಘ ಹಾಗೂ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿ ಬಳಿಕ ಮುನಿಯಾಲು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಅಭಿನಂದನಾ ಸಮಾರಂಭ ನಡೆಯಿತು.
ಯೋಧ ಆನಂದ ಕಬ್ಬಿನಾಲೆ ಅವರನ್ನು ಅವರ ಧರ್ಮಪತ್ನಿ ಸರಿತಾ ಹಾಗೂ ಅವರ ತಂದೆ ತಾಯಿ ಸಂಜೀವ ಹಸಳ ಮತ್ತು ಗಿರಿಜಾ ಅವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಇದೇ ಸಂದರ್ಭ ಈಗಾಗಲೇ ನಿವೃತ್ತಿ ಹೊಂದಿದ ಯೋಧರುಗಳಾದ ಪ್ರವೀಣ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಜಯ ಶೆಟ್ಟಿಗಾರ್, ಶ್ರೀನಿವಾಸ ಅವರುಗಳಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆನಂದ ಕಬ್ಬಿನಾಲೆ ಅವರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಬೇಕು, ಭಾರತ ಮಾತೆಗೆ ಸೇವೆ ಸಲ್ಲಿಸಿ ದೇಶ ಭಕ್ತಿ ಮೈಗೂಡಿಸಿಕೊಳ್ಳಬೇಕು. ಈಗಿನ ಯುವಕರಿಗೆ ಅಗ್ನಿಪಥ್ ಅಡಿಯಲ್ಲಿ ಸೈನ್ಯಕ್ಕೆ ಸೇರಲು ಒಳ್ಳೆಯ ಅವಕಾಶ ಸಿಗುತ್ತಿದೆ. ಪ್ರಧಾನಿಯವರು ದೂರದೃಷ್ಟಿಯ ಆಲೋಚನೆ ಮಾಡಿದ್ದಾರೆ. ಇದು ಒಳ್ಳೆಯ ವಿಧಾನ. ನಮ್ಮ ಗ್ರಾಮದಲ್ಲಿ ನನಗೆ ಇಷ್ಟು ಅದ್ಧೂರಿಯಾಗಿ ಸ್ವಾಗತ ಕೋರಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಉದಯ ಶೆಟ್ಟಿ ಮುನಿಯಾಲು,
ಮುನಿಯಾಲು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಗೋಪಿನಾಥ್ ಭಟ್, ಡಾ.ಸುಧಾಕರ ಶೆಟ್ಟಿ, ಡಾ. ಸುದರ್ಶನ ಹೆಬ್ಬಾರ್, ಡಾ. ಅಮರಜಿತ್, ರಮೇಶ್ ಸುವರ್ಣ, ಮಂಜುನಾಥ, ಕೃಷ್ಣ ಶೆಟ್ಟಿಗಾರ್, ಕೆಪಿಎಸ್ ವಿದ್ಯಾ ಸಂಸ್ಥೆಯ ಪ್ರಾಶುಪಾಲರಾದ ಬೇಬಿ ಶೆಟ್ಟಿ, ಪ್ರಕಾಶ್ ಪೂಜಾರಿ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.















.
.
.
.
.
.
.
.
.
.
