ಹೆಬ್ರಿ: ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರೊಬ್ಬರು ಸಾಲದ ಕಂತು ಕಟ್ಟಿಲ್ಲವೆಂದು ಅವರನ್ನು ಯೋಜನೆಯ ಕಚೇರಿಯಲ್ಲಿ ಕೂಡಿ ಹಾಕಿ ಅನ್ನ ನೀರು ಕೊಡದೇ ಸಾಲ ಮರು ಪಾವತಿ ಮಾಡದಿದ್ದರೆ ಮನೆಯ ಸಾಮಾಗ್ರಿಗಳನ್ನು ವಶಪಡಿಸಿ ಮನೆಗೆ ಬೆಂಕಿ ಹಾಕುವುದಾಗಿ ಬೆದರಿಕೆಯೊಡ್ಡಿದ ಕುರಿತು ಯೋಜನೆಯ ಸೇವಾ ಪ್ರತಿನಿಧಿ ಸೇರಿ ತಂಡದ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿಯ ಗಣೇಶ ಎಂಬವರು ಐಸ್ ಕ್ರೀಂ ವ್ಯಾಪಾರಕ್ಕಾಗಿ ಸುಮಾರು 13 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀವಿನಾಯಕ ಸ್ವಸಹಾಯ ತಂಡದಲ್ಲಿ ಸಾಲ ಪಡೆದಿದ್ದರು. ಸಾಲದ ಕಂತನ್ನು ಪ್ರತಿ ವಾರ ಸರಿಯಾಗಿ ಕಟ್ಟಿಕೊಂಡು ಬರುತ್ತಿದ್ದ ಗಣೇಶ್ ಹಣದ ಅವಶ್ಯವಿದ್ದಾಗ ಹಳೆಯ ಸಾಲವನ್ನು ನವೀಕರಣ ಮಾಡಿ ಹೊಸ ಸಾಲವನ್ನು ಪಡೆದುಕೊಂಡು ಪ್ರತಿ ವಾರ ಕಂತನ್ನು ಪಾವತಿಸುತ್ತಿದ್ದರು. ಕಳೆದ 8 ತಿಂಗಳ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಬಾಕಿಯಿದ್ದ 1.70 ಲಕ್ಷ ಸಾಲವನ್ನು ನವೀಕರಿಸಿ 3 ಲಕ್ಷ ರೂ ಸಾಲವನ್ನು ಪಡೆದುಕೊಂಡು ವಾರದ ಕಂತಿನ ಹಣ ಸರಿಯಾಗಿ ಪಾವತಿಸಿದರೂ ಸಾಲ ಸಂದಾಯವಾಗಿರುವುದಿಲ್ಲ ಎಂದು ಯೋಜನೆಯ ಸೇವಾಪ್ರತಿನಿಧಿ ಸಂಗೀತಾ ಎಂಬವರು ಜೂ.24 ರಂದು ಗಣೇಶ್ ಅವರನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಛೇರಿಗೆ ಬರಮಾಡಿಕೊಂಡು ಸಾಲದ ಕಂತಿನ ಹಣ ಕಟ್ಟುವಂತೆ ಒತ್ತಡ ಹಾಕಿದ್ದರು. ಆದರೆ ನನಗೆ ಅನಾರೋಗ್ಯದ ಸಮಸ್ಯೆಯಿದೆ ಈ ವಾರ ಸಾಲದ ಕಂತು ಕಟ್ಟಲು ನನ್ನಲ್ಲಿ ಹಣವಿಲ್ಲ ನನ್ನ ಉಳಿತಾಯ ಖಾತೆಯಿಂದ ಸಾಲದ ಕಂತನ್ನು ಪಾವತಿಸಿಕೊಳ್ಳುವಂತೆ ಹೇಳಿದಾಗ ಅದು ಆಗುವುದಿಲ್ಲ ಹಣ ಕಟ್ಟಲಿಲ್ಲ ಅಂದರೆ ಇಲ್ಲಿಯೇ ಕುಳಿತುಕೊ ಎಂದು ಗಣೇಶ್ ಅವರಿಗೆ ಅನ್ನ ನೀರು ನೀಡದೇ ಹೊರಗಡೆ ಬಿಡದೇ ಕಚೇರಿ ಒಳಗಡೆ ಕೂಡಿ ಹಾಕಿ ಕಿರುಕುಳ ನೀಡಿದ್ದರು. ಇದಾದ ಬಳಿಕ ಜು. 1ರಂದು ಸೋಮವಾರ ಬೆಳಗ್ಗೆ ಗಣೇಶ್ ಅವರ ನೆರೆಮನೆಯ ಶ್ಯಾಮ ಎಂಬವರ ಮನೆಗೆ ಬಂದ ಐವರ ತಂಡ ಅವರ ಬಳಿ ಗಣೇಶ್ ಅವರ ಸಾಲದ ವಿಚಾರ ಪ್ರಸ್ತಾಪಿಸಿ ಸಾಲ ಕಟ್ಟದಿದ್ದರೆ ನಾಳೆ ಇನ್ನಷ್ಟು ಜನ ಬರಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.ಇದಲ್ಲದೇ ಗಣೇಶ್ ಅವರ ಮಕ್ಕಳು ಸಂಜೆ ಶಾಲೆ ಮುಗಿಸಿ ಮನೆಗೆ ಬರುವಾಗ ಮಕ್ಕಳನ್ನು ತಡೆದು ನಿಲ್ಲಿಸಿ ನಿಮ್ಮ ಅಪ್ಪ ಹಣ ಕಟ್ಟಲಿಲ್ಲ ಅವರಿಗೆ ಹಣ ಕಟ್ಟಲು ಹೇಳು ಎಂದು ಬೆದರಿಸಿದ್ದಾರೆ. ಗಣೇಶ್ ಹಣ ಕಟ್ಟಿಲ್ಲವೆಂದು ಮಂಗಳವಾರ ಬೆಳಗ್ಗೆ ಆರೋಪಿಗಳಾದ ಸೇವಾಪ್ರತಿನಿಧಿ ಸಂಗೀತಾ, ಸದಾನಂದ, ಸಂತೋಷ, ರೇವತಿ ಎಂಬವರು ಸೇರಿ ಗಣೇಶ್ ಅವರ ಮನೆಯ ಅಂಗಳಕ್ಕೆ ಬಂದು ಅಂಗಳದಲ್ಲಿ ನಿಂತುಕೊAಡು ನೀವು ಸಾಲ ಮರು ಪಾವತಿ ಮಾಡದಿದ್ದಲ್ಲಿ ನಿಮ್ಮ ಮನೆಯಲ್ಲಿ ಇರುವ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುವುದಲ್ಲದೇ ನಿಮ್ಮನ್ನು ಮನೆಯ ಒಳಗೆ ಹಾಕಿ ಬೆಂಕಿ ಹಚ್ಚುವುದಾಗಿ ಬೆದರಿಸಿ, ಗಣೇಶ್ ಅವರ ಪತ್ನಿಗೂ ಅವಾಚ್ಯ ಶಬ್ದದಿಂದ ಬೈಯ್ದು ನಿಂದಿಸಿದ್ದಾರೆ ಎಂದು ಗಣೇಶ್ ಅವರು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
