ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರೀ ಮಳೆಗೆ ಶೃಂಗೇರಿ-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರ ಮೇಲೆ ಗುಡ್ಡ ಕುಸಿದಿದೆ. ರಸ್ತೆಗೆ ಅಡ್ಡಲಾಗಿ ಮಣ್ಣು ಬಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ತುಂಗಾ, ಭದ್ರೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶೃಂಗೇರಿಯಲ್ಲಿ ನೆರೆ ಆತಂಕ ಸೃಷ್ಟಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿರುವದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಶಾಲೆಗಳಿಗೆ ರಜೆ ನೀಡಲಾಗಿದೆ. ಶೃಂಗೇರಿ ಭಾಗದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆಯಾಗಿದ್ದು ತುಂಗಾ ನದಿ ನೀರಿನ ಪ್ರಮಾಣ ಏರಿಕೆಯಾಗಿದೆ. ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕಿಸುವ ಪರ್ಯಾಯ ಮಾರ್ಗ ಜಲಾವೃತವಾಗಿದ್ದು, ಮಠದ ಪಾರ್ಕಿಂಗ್ ಪ್ರದೇಶವಾದ ಗಾಂಧಿ ಮೈದಾನದಲ್ಲಿ ತುಂಗಾ ನದಿ ನೀರು ನುಗ್ಗುವ ಆತಂಕ ಸೃಷ್ಟಿಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಶೃಂಗೇರಿ ದೇವಾಲಯ ಸಮೀಪದ ತುಂಗಾ ನದಿಯ ತೀರದಲ್ಲಿರುವ ಕಪ್ಪೆ ಶಂಕರ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ. ಮಳೆ ಹೀಗೆ ಮುಂದುವರೆದರೇ ಶೃಂಗೇರಿ ಶಾರದಾ ಮಠದ ಸುತ್ತಮುತ್ತಲಿನ ಇನ್ನಷ್ಟು ಪ್ರದೇಶ ಜಲಾವೃತವಾಗುವ ಆತಂಕ ಸೃಷ್ಟಿಯಾಗಿದೆ.
ಕಳಸ ಭಾಗದಲ್ಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಭದ್ರಾ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು,ಒಳಹರಿವು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆ ಮುಂದುವರೆದಿದ್ದು. ತುಂಗಾ, ಭದ್ರಾ ನದಿಗಳ ಒಳ ಹರಿವಿನಲ್ಲಿ ಭಾರಿ ಏರಿಕೆಯಾಗುತ್ತಿದೆ. ಮಲೆನಾಡಲ್ಲಿ ಮಳೆಯಾದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನೆರೆ ಆತಂಕ ಸೃಷ್ಟಿಯಾಗಿದೆ.