
ಉಡುಪಿ, ಜ.06: ಬೈಲೂರಿನ ಉಮಿಕಲ್ ಬೆಟ್ಟದಲ್ಲಿನ ಪರಶುರಾಮ ಥೀಮ್ ಪಾರ್ಕ್ ನಲ್ಲಿ ನಡೆದ ಕಳ್ಳತನ ಪ್ರಕರಣ ಹಲವಾರು ಅನುಮಾನಗಳಿಗೆ ಎಡೆಮಾಡಿದ್ದು, ಇದೊಂದು ಪೂರ್ವನಿಯೋಜಿತ ಕೃತ್ಯ ಎನ್ನುವ ಶಂಕೆ ವ್ಯಕ್ತವಾಗಿದ್ದು, ಕಳ್ಳತನ ಪ್ರಕರಣದ ಕುರಿತು ಸಂಬಂಧಪಟ್ಟವರು ಪೊಲೀಸರಿಗೆ ದೂರು ನೀಡುವ ಮುನ್ನವೇ
ಸುನಿಲ್ ಕುಮಾರ್ ತನ್ನ ಫೇಸ್ ಬುಕ್ ನ ಮುಖಾಂತರ ಕಳ್ಳತನದ ಮಾಹಿತಿಯನ್ನು ಹಂಚಿಕೊಳ್ಳಲು ಹೇಗೆ ಸಾಧ್ಯವಾಯಿತು..?
ಕಳ್ಳತನದ ಪ್ರಥಮ ಮಾಹಿತಿ ಸುನಿಲ್ ಕುಮಾರ್ ಗೆ ಹೇಗೆ ದೊರಕಿತು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಪ್ರಶ್ನಿಸಿದ್ದಾರೆ.
ಅವರು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳ್ಳತನ ಪ್ರಕರಣ ನಡೆದ ಮರುದಿನವೇ ಸುನಿಲ್ ಕುಮಾರ್ ಮತ್ತು ತಂಡ ಪರಶುರಾಮ ಬೆಟ್ಟದ ಮೇಲೆ ಹೋಗಿ ಮಾಧ್ಯಮದ ಮುಂದೆ
ಮಾತನಾಡಿದ ವಿಚಾರಗಳು ಇದು ಪೂರ್ವ ಯೋಜಿತ ಕೃತ್ಯ ಎನ್ನುವುದಕ್ಕೆ ಸ್ಪಷ್ಟ ಸಾಕ್ಷಿ ನುಡಿಯುತ್ತಿದೆ.
ಮೊದಲಿಗೆ ಕಳ್ಳತನ ನಡೆಸಿ ನಂತರ ಇವರದೇ ತಂಡ ಬೆಟ್ಟದ ಮೇಲೆ ಹೋಗಿ ಅದನ್ನು ಪರಿಶೀಲನೆ ನಡೆಸಿ ನಂತರ ಅಲ್ಲಿ ಸ್ವಚ್ಚತಾ ಕಾರ್ಯವನ್ನು ನಡೆಸಿ ಕಾರ್ಯಕ್ರಮ ಮಾಡುತ್ತೇವೆ ಎಂದಿರುವುದು ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದ ಉದಯ ಶೆಟ್ಟಿ,
ಉಮಿಕಲ್ ಬೆಟ್ಟದ ಮೇಲೆ ಮತ್ತೆ ಭವ್ಯವಾದ ಪರಶುರಾಮನ ಪ್ರತಿಮೆ ನಿರ್ಮಾಣ ಆಗಬೇಕೆಂದು ನಾನು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದೇನೆ, ನನ್ನ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು 5 ಲಕ್ಷ ರೂಪಾಯಿ ಮೊತ್ತವನ್ನು ಪಾವತಿಸುವಂತೆ ನಿರ್ದೇಶನ ನೀಡಿದ್ದು ಅದರಂತೆ ನಾನು ಮೊತ್ತವನ್ನು ಪಾವತಿಸಿ ಮುಂದಿನ ಆದೇಶಕ್ಕೆ ಕಾಯುತ್ತಿದ್ದೇನೆ. ನನ್ನ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಿಂದ ಕಂಗೆಟ್ಟಿರುವ ಶಾಸಕ ಸುನಿಲ್ ಕುಮಾರ್ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ಇಂತಹ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಥೀಮ್ ಪಾರ್ಕ್ ಯೋಜನೆಯನ್ನು ಆರಂಭಿಸುವಾಗಲೇ ಸುನಿಲ್ ಕುಮಾರ್ ಮೋಸ ವಂಚನೆಯನ್ನು ಮಾಡದೇ ಪ್ರಾಮಾಣಿಕವಾಗಿ ಪ್ರತಿಮೆ ನಿರ್ಮಿಸುತ್ತಿದ್ದಾರೆ ಇಂದು ಅವರಿಗೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ ಎಂದು ಉದಯ ಶೆಟ್ಟಿ ಹೇಳಿದರು.
ಪರಶುರಾಮ ಥೀಮ್ ಪಾರ್ಕ್ ಆವರಣದಲ್ಲಿ ಸಿ ಸಿ ಕ್ಯಾಮೆರಾವನ್ನು ಅಳವಡಿಸಬೇಕೆಂದು ಹೋರಾಟಗಾರರು ಜಿಲ್ಲಾಡಳಿತಕ್ಕೆ ಮನವಿಯನ್ನು ಮಾಡಿರುತ್ತಾರೆ, ಆದರೆ ಇನ್ನೂ ಕೂಡ ಸಿ ಸಿ ಕ್ಯಾಮೆರವನ್ನು ಅಳವಡಿಸದೇ ಇರುವುದು ಜಿಲ್ಲಾಡಳಿತದ ಬೇಜವಾಬ್ದಾರಿಯಾಗುತ್ತದೆ, ಅಲ್ಲಿ ನಡೆಯುತ್ತಿರುವ ಎಲ್ಲಾ ಘಟನೆಗಳಿಗೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತವೇ ಹೊಣೆಯಾಗಿದೆ.
ಸಧ್ಯಕ್ಕೆ ಈ ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಪರಶುರಾಮ ಥೀಮ್ ಪಾರ್ಕ್ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ಜಿಲ್ಲಾಡಳಿತವೇ ನಡೆಸಿ ಅಲ್ಲಿನ ಸುರಕ್ಷತೆಯನ್ನು ಕಾಪಾಡಬೇಕು ಎಂದು ಉದಯ ಶೆಟ್ಟಿ ಆಗ್ರಹಿಸಿದ್ದಾರೆ.

.
.
