ಬೆಂಗಳೂರು: ನನ್ನ ಹೇಳಿಕೆಯಿಂದ ನೇಹಾ ಪೋಷಕರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
ಅವರು ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ನೇಹಾ ಕೊಲೆ ಕೃತ್ಯ ಖಂಡನೀಯ. ಈ ಕುರಿತು ತನಿಖೆ ನಡೆಸಲಾಗುತ್ತದೆ ಎಂದರು.
ನೇಹಾ ಹತ್ಯೆ ಕುರಿತು ಶುಕ್ರವಾರ ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿ,ಆಕೆ ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ ಆರೋಪಿ ಹತ್ಯೆ ಮಾಡಿರಬಹುದು. ಇದು ಲವ್ ಜಿಹಾದ್ ಅಲ್ಲ.ಇದೊಂದು ಆಕಸ್ಮಿಕ ಘಟನೆ,ಇದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಪರಮೇಶ್ವರ್ ಹೇಳಿಕೆ ನೀಡಿದ್ದರು.
ಆದರೆ ಗೃಹ ಸಚಿವ ಪರಮೇಶ್ವರ್ ಹಾಗೂ ಸರ್ಕಾರದ ವಿರುದ್ಧ ಬಿಜೆಪಿ ಕೆಂಡಕಾರಿದ್ದು, ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕೀಯದಿಂದ ಜಿಹಾದಿ ಕೃತ್ಯ ಮಿತಿಮೀರಿದೆ. ನಿಮ್ಮದೇ ಪಕ್ಷದ ನಾಯಕರ ಮಗಳು ಬರ್ಬರವಾಗಿ ಹತ್ಯೆಯಾದರೂ ನಿಮ್ಮ ಮನಸ್ಸು ಮಿಡಿಯಲಿಲ್ಲ.ಲವ್ ಜಿಹಾದ್ ಮೂಲಕ ಮುಗ್ಧ ಹಿಂದೂ ಯುವತಿಯರು ಬಲಿಯಾಗುತ್ತಿದ್ದಾರೆ.ನಿಮ್ಮ ಸರ್ಕಾರದಲ್ಲಿ ಜನರ ಜೀವಕ್ಕೆ ಬೆಲೆ ಇಲ್ಲವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ










