Share this news

ಉಡುಪಿ: ಬ್ಯಾಂಕ್ ಹರಾಜಿನಲ್ಲಿ ಆಸ್ತಿ ಖರೀದಿಸಿದವರು ನಿಗದಿತ ಅವಧಿಯಲ್ಲಿ ಬಾಕಿ ಪಾವತಿಸದಿದ್ದರೆ, ಮುಂಗಡವಾಗಿಟ್ಟಿದ್ದ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಹೈಕೋರ್ಟ್ ಆದೇಶಿಸಿದೆ.

ಉಡುಪಿ ಜಿಲ್ಲೆಯ ಕಾರ್ಕಳದ ಕೆ.ಸುಬ್ರಹ್ಮಣ್ಯರಾವ್ ಮತ್ತು ಅವರ ಪತ್ನಿ ಎಚ್.ಎಂ ನಾಗರತ್ನಗೆ 3.25 ಕೋಟಿ ರೂಪಾಯಿಗಳನ್ನು ಮರು ಪಾವತಿಸುವಂತೆ ನಿರ್ದೇಶನ ನೀಡಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕೆನರಾ ಬ್ಯಾಂಕ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ಆಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಮುಂಗಡವಾಗಿ ಠೇವಣಿ ಇರಿಸಿದ್ದ ಹಣವನ್ನು ಹಿಂದಿರುಗಿಸಬೇಕೆಂಬ ಮನವಿ ಅಂಗೀಕರಿಸಲು ಅವಕಾಶವಿಲ್ಲ. ಬ್ಯಾಂಕ್ ಅಧಿಕಾರಿಗಳು ಅನ್ಯಾಯವೆಸಗಿಲ್ಲ. ಅವಧಿ ವಿಸ್ತರಿಸಿದರೂ ಬಿಡ್ ನ ಬಾಕಿ ಮೊತ್ತವನ್ನು ನಿಗದಿತ ಅವಧಿಯಲ್ಲಿ ಪಾವತಿ ಮಾಡುವಲ್ಲಿ ವಿಫಲರಾಗಿದ್ದು , ಠೇವಣಿ ಹಣ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ನ್ಯಾಯಪೀಠ ಹೇಳಿದೆ.

ದಂಪತಿ ಪರ ವಕೀಲರು “ಬ್ಯಾಂಕ್ ನ ಭದ್ರತಾ ನಿಯಮಗಳ ಪ್ರಕಾರ 3 ತಿಂಗಳ ಕಾಲ ಅವಧಿ ವಿಸ್ತರಿಸಬಹುದಾಗಿದೆ. ಆದರೆ ಕೆನರಾ ಬ್ಯಾಂಕ್ ಇದಕ್ಕೆ ಅವಕಾಶ ನೀಡಿಲ್ಲ. ಈ ಸಂಬಂಧ ಬ್ಯಾಂಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ” ಎಂದು ವಾದ ಮಂಡಿಸಿದ್ದರು.

ಬ್ಯಾಂಕ್ ನೀಡಿದ ಸಾಲವನ್ನು ವಸೂಲಿ ಮಾಡುವ ಸಲುವಾಗಿ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿರುವ ಆಸ್ತಿಯೊಂದನ್ನು 2019 ರ ನವೆಂಬರ್ 26 ರಂದು ಇ ಹರಾಜು ನಡೆಸಿತ್ತು. ಸುಬ್ರಹ್ಮಣ್ಯ ರಾವ್ ಮತ್ತವರ ಪತ್ನಿ ಬಿಡ್ ನಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದರು. ಹಾಗಾಗಿ ಒಟ್ಟು ಬಿಡ್ ನ ಮೊತ್ತ 13 ಕೋಟಿ ರೂಪಾಯಿ ಆಗಿದ್ದು, ಅದರಲ್ಲಿ ಶೇಕಡಾ 25 ರಷ್ಟು ಅಂದರೆ 3.25 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಿದ್ದು , ಇನ್ನುಳಿದ ಮೊತ್ತ 9.75 ಕೋಟಿ ರೂಪಾಯಿ ಗಳನ್ನು 15 ದಿನಗಳಲ್ಲಿ ಪಾವತಿ ಮಾಡಬೇಕಾಗಿತ್ತು. 2022 ರ ಜನವರಿ 13 ರಂದು ದಂಪತಿ ಬಾಕಿ ಮೊತ್ತ ಪಾವತಿ ಮಾಡಲು 30 ದಿನಗಳ ಕಾಲಾವಕಾಶ ನೀಡಬೇಕೆಂದು ಬ್ಯಾಂಕ್ ಗೆ ಮನವಿ ಮಾಡಿದ್ದರು. ಅದಕ್ಕೆ ಒಪ್ಪಿದ್ದ ಬ್ಯಾಂಕ್ ಅಧಿಕಾರಿಗಳು 2022 ರ ಫೆಬ್ರವರಿ 10 ರವರೆಗೆ ಕಾಲಾವಕಾಶ ನೀಡಿದ್ದರು. ಆದರೆ ದಂಪತಿ ಬಾಕಿ ಮೊತ್ತ ಪಾವತಿ ಮಾಡಿರಲಿಲ್ಲ. ಬಳಿಕ ಅದೇ ಆಸ್ತಿಯನ್ನು ಬ್ಯಾಂಕ್ 11 ಕೋಟಿ ರೂಪಾಯಿ ಗೆ ಬೇರೆಯವರಿಗೆ ಮಾರಾಟ ಮಾಡಿತ್ತು ಮತ್ತು ಅರ್ಜಿದಾರರು ಇಟ್ಟಿದ್ದ ಮುಂಗಡ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

Leave a Reply

Your email address will not be published. Required fields are marked *