ಕಾರ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಜನರಾಡಿಕೊಳ್ಳುತ್ತಿದ್ದು, ಇದಕ್ಕೆ ಪುಷ್ಟೀಕರಣ ಎಂಬAತೆ ಕಾರ್ಕಳ ತಾಲೂಕಿನ ಬೋಳದಲ್ಲಿ ಕಾಂಗ್ರೆಸ್ ಮುಖಂಡ, ಬೋಳ ಗ್ರಾಮ ಪಂಚಾಯಿತ್ ನ ಮಾಜಿ ಅಧ್ಯಕ್ಷ , ಬೋಳ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷನ ಮನೆಗೆ ಅಬಕಾರಿ ಇಲಾಖೆಯ ಪೊಲೀಸರು ದಾಳಿ ನಡೆಸಿ 15 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ಜಪ್ತಿ ಮಾಡಿರುವ ಬಗ್ಗೆ ವರದಿಯಾಗಿದ್ದು ಇದರ ಮೂಲದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಆಗ್ರಹಿಸಿದ್ದಾರೆ.
ವೈನ್ ಮರ್ಚಂಟ್ ಅಸೋಸಿಯೇಷನ್ ನ ಸದಸ್ಯರು ಕಾಂಗ್ರೆಸ್ ಸರ್ಕಾರ ನಮ್ಮಿಂದ 700 ಕೋಟಿ ಹಣವನ್ನು ಲೂಟಿ ಹೊಡೆದಿದೆ ಎಂದು ಆರೋಪಿಸಿದ್ದು ಇದರ ನಡುವೆಯೇ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಕಾಂಗ್ರೆಸ್ ಮುಖಂಡನ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ವೈನ್ ಮರ್ಚೆಂಟ್ ಅಸೋಸಿಯೇಷನ್‌ಗೆ ಪರ್ಯಾಯವಾಗಿ ಕಾಂಗ್ರೆಸ್ ಸರ್ಕಾರ ತನ್ನ ಮುಖಂಡರ ಮೂಲಕ ಅಬಕಾರಿ ವ್ಯವಹಾರ ನಡೆಸುವ ಸಂಚು ರೂಪಿಸಿದೆಯೇ ಎನ್ನುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಅಬಕಾರಿ ಹಗರಣ ಸುಳ್ಳು ಎಂದು ವಾದಿಸುತ್ತಿರುವ ಸಿಂ ಸಿದ್ದರಾಮಯ್ಯನವರೇ, ಒಬ್ಬ ವ್ಯಕ್ತಿಯ ಮನೆಯಲ್ಲಿ ಇಷ್ಟು ಮೊತ್ತದ ಮದ್ಯ ಸಂಗ್ರಹಣೆಯಾಗಿದೆ ಎಂದರೆ ಅರ್ಥವೇನು? ಈ ರೀತಿ ದಾಸ್ತಾನು ಮಾಡುವುದಕ್ಕೆ ನೀವು ಅನಧಿಕೃತ ಪರವಾನಗಿ ನೀಡಿದ್ದೀರಾ? ಈ ದೋ ನಂಬರ್ ಮದ್ಯದ ವಹಿವಾಟು ಎಷ್ಟು ಕೋಟಿ ರೂ. ಮೊತ್ತದ ಹಗರಣ? ಅನ್ಯ ರಾಜ್ಯದ ಚುನಾವಣೆಗೋ ಅಥವಾ ನಿಮ್ಮದೇ ಪಕ್ಷದ ಶಾಸಕರ ಖರೀದಿಗೆ ನಡೆಸುತ್ತಿರುವ ಅಕ್ರಮ ಚಟುವಟಿಕೆಯೋ? ಕಾಂಗ್ರೆಸ್ ಸರ್ಕಾರದಲ್ಲಿ ಮನೆಮನೆಗೆ “ಬಾರ್ ಭಾಗ್ಯ” ಕೊಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಅಕ್ರಮವಾಗಿ ಮದ್ಯ ಹಂಚಿರುವ ಅನುಮಾನವಿದೆ. ಅಬಕಾರಿ ಇಲಾಖೆಯ ದಿಟ್ಟ ಕಾರ್ಯಾಚರಣೆಯು ಶ್ಲಾಘನೀಯವಾಗಿದ್ದು ಇದನ್ನು ಕಾರ್ಕಳ ಬಿಜೆಪಿಯು ಅಭಿನಂದಿಸುತ್ತಿದೆ. ಅಬಕಾರಿ ಇಲಾಖೆಯು ಯಾವುದೇ ಒತ್ತಡಕ್ಕೆ ಮಣಿಯದೆ ಗೋವಾದಿಂದ ಕಾರ್ಕಳಕ್ಕೆ ಈ ಮದ್ಯ ಹೇಗೆ ಬಂತು? ಇದರ ಹಿಂದಿರುವ ಪ್ರಭಾವಿ ವ್ಯಕ್ತಿಗಳು ಯಾರು? ಎನ್ನುವ ಬಗ್ಗೆ ತನಿಖೆ ನಡೆಸಿ ಪತ್ತೆ ಹಚ್ಚುವ ಕಾರ್ಯ ಮಾಡಬೇಕಿದೆ ಎಂದು ಆಗ್ರಹಿಸಿದ್ದಾರೆ.