Share this news

ಉಡುಪಿ: ದೇವರ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿರುವ ಕಾರ್ಕಳದ ಶಾಸಕ ಸುನಿಲ್ ಕುಮಾರ್, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಮೋಸ ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ‌ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.

ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬ ಭಾವನೆಯಲ್ಲಿದ್ದಾರೆ.‌ ದೇವರ- ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದವರು, ಈಗ ಭಗವಂತನಿಗೆ ಮೋಸ ಮಾಡಿದ್ದಾರೆ. ಮೂರ್ತಿ ಕಂಚಿನದ್ದೋ ಅಥವಾ ಫೈಬರಿನದ್ದೊ‌ ಎಂಬುದು ಜಗಜ್ಜಾಹಿರಾಗಿದೆ. ಬಿಜೆಪಿಗೆ ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯ ಮಾಡುವುದು ಕರಗತವಾಗಿದೆ ಎಂದು ಆರೋಪಿಸಿದರು.

ಅವರು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ದೇವರ ಹೆಸರಿನಲ್ಲಿ ಭಾವನಾತ್ಮಕವಾಗಿ ರಾಜಕಾರಣ ಮಾಡುವವರ ವಿರುದ್ಧ ಇನ್ನಾದರೂ ಉಡುಪಿ ಜಿಲ್ಲೆಯ ಜನತೆ ಎಚ್ಚೆತ್ತುಕೊಳ್ಳಬೇಕು. ಇವರು ದೇವರನ್ನೇ ಬಿಡ್ಲಿಲ್ಲ. ಇನ್ನು ಮನುಷ್ಯರು ಯಾವ ಲೆಕ್ಕ?. ಬಿಜೆಪಿ ಆಡಳಿತದ ಕೊನೆಯ ಕ್ಯಾಬಿನೆಟ್ ಸಭೆಯಲ್ಲಿ ಗೋಮಾಳದಲ್ಲಿ ಪರಶುರಾಮನ ಮೂರ್ತಿ ಸ್ಥಾಪನೆ ಮಾಡಬಾರದು ಎಂದು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆ ಮೂರ್ತಿ ಕಾಮಗಾರಿ ಮುಂದುವರಿಸಬೇಕು ಎಂಬುದು ನಮ್ಮ ಆಶಯ. ಮೂರ್ತಿಯನ್ನು ಪೂರ್ಣಗೊಳಿಸುವುದು ನಮ್ಮ ಉದ್ದೇಶ ಎಂದು ಸಿಎಂ ಹೇಳಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.


ಬೈಂದೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಹಕ್ಕುಚ್ಯುತಿ ಎಂದರೇನು ಎಂದು ಎರಡು ಬಾರಿ ಶಾಸಕಿಯಾದ ನನಗೂ ಗೊತ್ತು. ಅಧಿಕಾರದ ಲಾಭ ದುರ್ಲಾಭದ ಬಗ್ಗೆ ನನಗೂ ಸಾಮಾನ್ಯ ಜ್ಞಾನ ಇದೆ. ಯಾರ ಹಕ್ಕನ್ನ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಅಧಿಕಾರಿಗಳ ಸಭೆ ಎಲ್ಲಿ ಕರೀಬೇಕು, ಅಲ್ಲಿಯೇ ಕರೆಯಬೇಕು, ಏನೂ ತೊಂದರೆ ಆಗಲ್ಲ. ತನ್ನ ಖಾಸಗಿ ಸ್ಥಳದಲ್ಲಿ ಅಧಿಕಾರಿಗಳನ್ನು ಸಭೆಗೆ ಕರೆದರೆ ತೊಂದರೆಯಾಗುತ್ತದೆ. ಸರ್ಕಾರಿ ಕಾರ್ಯಕ್ರಮಗಳು ಸರ್ಕಾರಿ ಕಚೇರಿಯಲ್ಲಿ ಆಗುವುದೇ ಒಂದು ಪ್ರೊಟೋಕಾಲ್ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಪಡುಬಿದ್ರೆ ಬಳಿಯ ಕಂಚಿನಡ್ಕ ಬಳಿ ಟೋಲ್ ಗೇಟ್ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಟೋಲ್ ಗೇಟ್ ಗೆ ಸಾರ್ವಜನಿಕರ ವಿರೋಧದ ಬಗ್ಗೆ ನನಗೆ ಮಾಹಿತಿ ಬಂದಿದ್ದು, ನಾಲ್ಕು ಕಿಲೋಮೀಟರ್ ನಲ್ಲಿ ಎರಡು ಟೋಲ್ ಗೇಟ್ ಬಂದಿರುವುದು ಬಹಳ ಚರ್ಚೆಯಾಗುತ್ತಿದೆ. ಜಿಲ್ಲಾಧಿಕಾರಿ, ಎಸ್ ಪಿ, ಇತರ ಅಧಿಕಾರಿಗಳ ಜೊತೆ ನಾನು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸುತ್ತೇನೆ. ಅಲ್ಲಿರುವ ಸಮಸ್ಯೆ ಏನು ಎಂದು ಪರಿಶೀಲಿಸಿ ಎರಡು ಕಡೆ ಟೋಲ್ ಸಂಗ್ರಹದಿಂದ ಜನರಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು.

 


 

 

 

 

                        

                          

                        

                          

 

`

Leave a Reply

Your email address will not be published. Required fields are marked *