ಉಡುಪಿ: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ರೈತರ ಪಹಣಿಯಲ್ಲಿ ಏಕಾಎಕಿ ‘ವಕ್ಫ್ ಆಸ್ತಿ’ ಹೆಸರು ನಮೂದಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿ ರೈತರು ಆತಂಕಗೊಂಡಿದ್ದಾರೆ. ತಮ್ಮ ಜಮೀನಿನ ಪಹಣಿ, ಸರ್ಕಾರಿ ದಾಖಲೆಗಳನ್ನು ತೆಗೆದು ನೋಡುತ್ತಿದ್ದಾರೆ. ಉಡುಪಿ ಜಿಲ್ಲೆಯ ಜನರು ಹೀಗೆ ಪರಿಶೀಲನೆ ವೇಳೆ ಉಡುಪಿಯ ಶಿವಳ್ಳಿ ಗ್ರಾಮದಲ್ಲಿ ‘ಸುಲ್ತಾನಪುರ’ ಎಂಬ ಊರಿನ ಹೆಸರು ಕಂಡು ಅಕ್ಷರಶಃ ದಂಗಾಗಿದ್ದಾರೆ.
ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದಲ್ಲಿ ಸುಲ್ತಾನಪುರ ಎಂಬ ಅಪರಿಚಿತ ಊರಿನ ಹೆಸರು ನಮೂದಾಗಿದೆ. ಈ ಹಿಂದೆ ಯಾವತ್ತೂ ಈ ಗ್ರಾಮಕ್ಕೆ ಸುಲ್ತಾನಪುರ ಎನ್ನುವ ಹೆಸರೇ ಇರಲಿಲ್ಲ. ಆದರೆ ಕರ್ನಾಟಕ ರಾಜ್ಯ ಸರ್ಕಾರದ ದಿಶಾಂಕ್ ಆಪ್‌ನಲ್ಲಿ ಸುಲ್ತಾನಪುರ ಎಂಬ ಹೆಸರು ನಮೂದಾಗಿದೆ. ಅದು ಬಂದಿದ್ದು ಹೇಗೆ ಎನ್ನುವುದು ಯಾರಿಗೂ ತಿಳಿಯುತ್ತಿಲ್ಲ. ವಕ್ಫ್ ವಿವಾದ ಎದ್ದಿರುವ ಹಿನ್ನೆಲೆ ಸರ್ಕಾರಿ ದಾಖಲೆಗಳನ್ನು ತಡಕಾಡುತ್ತಿರುವ ಸಾರ್ವಜನಿಕರಿಗೆ ಇಂತಹ ಹೆಸರಿರುವುದು ಕಂಡು ಶಾಕ್ ಆಗಿದೆ.
ಶಿವಳ್ಳಿ ಗ್ರಾಮದ ಸರ್ವೇ ನಂಬರ್ ಪರಿಶೀಲನೆ ವೇಳೆ ಸುಲ್ತಾನಪುರ ಹೆಸರು ಪತ್ತೆಯಾಗಿದೆ. ವಾಸ್ತವವಾಗಿ ಶಿವಳ್ಳಿಯಲ್ಲಾಗಲಿ, ಸುತ್ತಮುತ್ತಲಿನ ಪರಿಸರದಲ್ಲಾಗಲಿ ಆ ಹೆಸರಿನ ಊರೇ ಇಲ್ಲ. ಈ ಆ್ಯಪ್‌ನಲ್ಲಿ ಸುಲ್ತಾನಪುರ ಹೆಸರಿದೆ. ಅಷ್ಟೇ ಅಲ್ಲ, ಊರಿಗೆ ಸಂಬಂಧವೇ ಇಲ್ಲದ ಸಾಲು ಸಾಲು ಹೆಸರುಗಳಿವೆ. ಮುದ್ದತ್ತನೂರು, ಸೋಟ್ನಟ್ಟಿ, ಪೇಪ್ನೋಲ್ಲಿ, ಮಿಕ್ಕಿರೆ, ಸರ್ಕೂರು ಇವೆಲ್ಲ ಯಾರು ಕೇಳಿದ ಹೆಸರುಗಳು, ಎಲ್ಲಿಂದ ಬಂದವು ಸಾರ್ವನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಷ್ಟಕ್ಕೂ ಈ ದಿಶಾಂಕ್ ಆ್ಯಪ್ ಆರ್ ಟಿ ಸಿ ಪರಿಶೀಲಿಸುವ ಆ್ಯಪ್ ಅಲ್ಲವೇ ಅಲ್ಲ.ಈ ಅ್ಯಪನ್ನು ಕೇವಲ ಸರ್ವೇ ನಂಬರ್ ಗಳನ್ನು ಗುರುತಿಸಲು ಮಾತ್ರ ಸಿದ್ದಪಡಿಸಲಾಗಿದೆ. ಸ್ಥಳದ ಹೆಸರು ನಮೂದಿಸುವ ವೇಳೆ ತಪ್ಪಾಗಿರುವ ಸಾಧ್ಯತೆಯಿದೆ. ಈ ಆಪ್‌ನಲ್ಲಿ ಇಂತಹ ಅನೇಕ ತಪ್ಪುಗಳು ಕಂಡುಬಂದಿದ್ದು, ಖಾಸಗಿಯವರ ನೆರವಿನೊಂದಿಗೆ ದಾಖಲೆಗಳು ಅಪ್ಲೋಡ್ ಆಗಿವೆ. ಈ ಬಗ್ಗೆ ಪರಿಶೀಲನೆ ನಡೆಸಿ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.