ಕಾರ್ಕಳ: ಆರೋಗ್ಯ ಸೇವೆಗಳ ಪ್ರಗತಿಯತ್ತ ಮಹತ್ವದ ಹೆಜ್ಜೆಯಿಟ್ಟಿರುವ ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಇದೀಗ ಅತ್ಯಾಧುನಿಕ 24×7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆಯಾಗಿದೆ.
ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದಿಲೀಪ್ ಜೋಸ್ ಅಧಿಕೃತವಾಗಿ ಸಿಟಿ ಸ್ಕ್ಯಾನ್ ಸೌಲಭ್ಯವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಹೆ ಸಹ ಕುಲಾಧಿಪತಿ ಡಾ ಎಚ್ ಎಸ್ ಬಲ್ಲಾಳ್ ಮಾತನಾಡಿ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ 24/7 ಸಿ ಟಿ ಸ್ಕ್ಯಾನ್ ಸೌಲಭ್ಯವನ್ನು ಪ್ರಾರಂಭಿಸುತ್ತಿರುವುದು ಉನ್ನತ ದರ್ಜೆಯ ಆರೋಗ್ಯ ಸೇವೆಯನ್ನು ಒದಗಿಸುವ ನಮ್ಮ ಬದ್ಧತೆಯ ಪ್ರಮುಖ ಹೆಜ್ಜೆಯಾಗಿದೆ. ಈ ಸುಧಾರಿತ ರೋಗನಿರ್ಣಯ ಸೇವೆ ಹೆಚ್ಚು ನಿಖರವಾದ ಮತ್ತು ಸಮಯೋಚಿತ ರೋಗನಿರ್ಣಯವನ್ನು ಸಕ್ರೀಯಗೊಳಿಸುತ್ತದೆ ಎಂದರು.
ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಎಂ ಡಿ ವೆಂಕಟೇಶ್ ಮಾತನಾಡಿ, “ಈ ಸುಧಾರಿತ ರೋಗನಿರ್ಣಯ ತಂತ್ರಜ್ಞಾನವು ನಿಖರವಾದ, ಸಮಯೋಚಿತ ಆರೈಕೆಯನ್ನು ಒದಗಿಸುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆಗಳು ಎಲ್ಲರಿಗೂ ದೊರಕಬೇಕು ಎಂಬ ನಮ್ಮ ಧ್ಯೇಯವನ್ನು ಪ್ರತಿಬಿಂಬಿಸುತ್ತದೆ” ಎಂದರು.
ಮಣಿಪಾಲ ಹೆಲ್ತ್‌ಮ್ಯಾಪ್ ಡಯಾಗ್ನೋಸ್ಟಿಕ್ಸ್ ಪ್ರೈ.ಲಿ.ನ ಮುಖ್ಯ ರೇಡಿಯಾಲಜಿಸ್ಟ್ ಹಾಗೂ ಪ್ರಾದೇಶಿಕ ಮುಖ್ಯಸ್ಥ ಡಾ ಸಂದೀಪ್ ಬಲ್ಲಾಳ್, ಆಸ್ಪತ್ರೆಯಲ್ಲಿ ಪರಿಚಯಿಸಲಾದ ಸುಧಾರಿತ ಸಿ ಟಿ ಸ್ಕ್ಯಾನ್ ಸಾಮರ್ಥ್ಯಗಳ ಪರಿಚಯ ನೀಡಿದರು. ಮಾಹೆಯ ಆರೋಗ್ಯ ವಿಜ್ಞಾನಗಳ ಸಹ ಉಪಕುಲಪತಿ ಡಾ. ಶರತ್ ಕುಮಾರ್ ರಾವ್, ಮಾಹೆಯ ಸಿ ಓ ಓ ಡಾ. ರವಿರಾಜ್ ಎನ್.ಎಸ್., ಕೆ ಎಂ ಸಿ ಮಣಿಪಾಲ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಮಾಹೆಯ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್ ವೇಣುಗೋಪಾಲ್, ರೋಟರಿ ಕ್ಲಬ್ ಆಫ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಉಪೇಂದ್ರ ವಾಗ್ಲೆ, ರೋಟರಿ ಕ್ಲಬ್ ಆಫ್ ಕಾರ್ಕಳ ಅಧ್ಯಕ್ಷ ಇಕ್ಬಾಲ್ ಅಹಮದ್ ಹಾಗೂ ಹಿರಿಯ ರೋಟರಿ ಸದಸ್ಯರು ಉಪಸ್ಥಿತರಿದ್ದರು.
ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ್ ಮಾತನಾಡಿ, ದಿನದ 24 ಗಂಟೆಯೂ CT ಸ್ಕ್ಯಾನ್ ಸೌಲಭ್ಯ ಲಭ್ಯವಿದ್ದು, ಇದರಿಂದ ಸಕಾಲದಲ್ಲಿ ರೋಗನಿರ್ಣಯವನ್ನು ಪತ್ತೆಹಚ್ಚಬಹುದು ಎಂದರು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ 6364137830 ಕರೆ ಮಾಡಬಹುದಾಗಿದೆ ಎಂದರು.