ಅಹಮದಾಬಾದ್:ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿದೆ, ದೇಶದ ಸಾರ್ವತ್ರಿಕ ಚುನಾವಣೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಅವರು ಮಂಗಳವಾರ ಗುಜರಾತ್ ಅಹಮದಾಬಾದ್ ನ ನಿಶಾನ್ ಹೈಸ್ಕೂಲ್ ನಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿ,ಪ್ರತಿಯೊಬ್ಬರೂ ಮತ ಚಲಾಯಿಸುವಂತೆ ಮತ್ತು ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸುವಂತೆ ಮತದಾರರಿಗೆ ಕರೆ ನೀಡಿದರು.
ಇಂದು ಮೂರನೇ ಹಂತದ ಮತದಾನ. ನಮ್ಮ ದೇಶದಲ್ಲಿ ಮತದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ ಮತ್ತು ಅದೇ ಉತ್ಸಾಹದಲ್ಲಿ, ದೇಶವಾಸಿಗಳು ಸಾಧ್ಯವಾದಷ್ಟು ಮತ ಚಲಾಯಿಸಬೇಕು. ಇನ್ನೂ 4 ಸುತ್ತಿನ ಮತದಾನ ಬಾಕಿ ಇದೆ. ಗುಜರಾತ್ ರಾಜ್ಯದ ಮತದಾರನಾಗಿ, “ನಾನು ನಿಯಮಿತವಾಗಿ ಮತ ಚಲಾಯಿಸುವ ಏಕೈಕ ಸ್ಥಳ ಇದು ಮತ್ತು ಅಮಿತ್ ಶಾ ಅವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಅವರು ಹೇಳಿದರು. ಈ ಬಾರಿ ಸುಮಾರು 64 ದೇಶಗಳಲ್ಲಿ ಚುನಾವಣೆಗಳು ನಡೆಯಲಿವೆ ಎಂದು ಹೇಳಿದ ಪ್ರಧಾನಿ, ಅವೆಲ್ಲವನ್ನೂ ಹೋಲಿಕೆ ಮಾಡಿದಾಗ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಭಿನ್ನವಾಗಿದೆ ಎಂದು ಹೇಳಿದರು. ಜನ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಮತ್ತು ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸುವಂತೆ ನಾನು ಮತ್ತೊಮ್ಮೆ ದೇಶವಾಸಿಗಳಿಗೆ ಹೇಳುತ್ತೇನೆಎಂದು ಪ್ರಧಾನಿ ಮೋದಿ ಹೇಳಿದರು.






