ಮಂಗಳೂರು : ಮಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ವಿದ್ಯಾರ್ಥಿಗಳನ್ನು ಅಪಹರಿಸಿ ಸಿಗರೇಟ್ ನಿಂದ ಸುಟ್ಟು ಹಲ್ಲೆ ನಡೆಸಿರುವ ಹೀನ ಕೃತ್ಯ ಬೆಳಕಿಗೆ ಬಂದಿದೆ.
ಮಂಗಳೂರಿನ ಮಹಾಕಾಳಿ ಪಡ್ಡು ಎಂಬಲ್ಲಿ ಮಂಗಳೂರಿನ ಎರಡು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ಈ ಗಲಾಟೆ ನಡೆದಿದೆ. ಫುಟ್ಬಾಲ್ ಪಂದ್ಯದ ವೇಳೆ ಸಣ್ಣ ಕಿರಿಕ್ ನಿಂದ ಶುರುವಾದ ಗಲಾಟೆ ಬಳಿಕ ಒಂದು ಕಾಲೇಜಿನ ವಿದ್ಯಾರ್ಥಿಗಳನ್ನು ಮತ್ತೊಂದು ಕಾಲೇಜಿನ ವಿದ್ಯಾರ್ಥಿಗಳು ಅಪಹರಿಸುವ ಮಟ್ಟಕ್ಕೆ ಬಂದಿದೆ. ಇಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿಗಳು ಅಪಹರಿಸಿದವರನ್ನು ಅರೆನಗ್ನ ಮಾಡಿ ಸಿಗರೇಟ್ ಗಳಿಂದು ಸುಟ್ಟು ಹಲ್ಲೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಅಮಾನವೀಯ ಕೃತ್ಯ ಸಾಮಾಜಿಕ ಜಲಾತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಂಗಳೂರಿನ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ಘಟನೆ ಕುರಿತು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಮಾತನಾಡಿ, ಆಗಸ್ಟ್ 14 ರಂದು ನಗರದ ನೆಹರು ಮೈದಾನದಲ್ಲಿ ಫುಟ್ಬಾಲ್ ಪಂದ್ಯ ನಡೆದಿತ್ತು. ಯೆನೆಪೋಯ ಪುಟ್ಬಾಲ್ ತಂಡ ಹಾಗೂ ಅಲೋಶಿಯಸ್ ತಂಡದ ಮಧ್ಯೆ ಪಂದ್ಯ ನಡೆದಿತ್ತು. ಪಂದ್ಯದಲ್ಲಿ ಯೆನೆಪೋಯ ತಂಡ ಜಯಗಳಿಸಿತ್ತು.ಈ ವಿಚಾರದಲ್ಲಿ ಆಗಸ್ಟ್ 14ರಂದೇ ಎರಡು ತಂಡದ ನಡುವೆ ಗಲಾಟೆ ಪ್ರಾರಂಭವಾಗಿತ್ತು. ಸೋಮವಾರ (ಆ.19)ರ ಸಂಜೆ ಯೆನೆಪೋಯ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು, ಮಾತಾ ಸಂಸ್ಥೆಯ ಓರ್ವ ವಿದ್ಯಾರ್ಥಿಯನ್ನು ದಿಯಾನ್, ತಸ್ಲಿಮ್, ಸಲ್ಮಾನ್ ಹಾಗೂ ಇತರ ಇಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳ ಗುಂಪು ಅಪಹರಿಸಿತ್ತು.
ನಂತರ ಮಹಾಕಾಳಿ ಪಡ್ಪು ಭಾಗಕ್ಕೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸುವ ಸಂದರ್ಭದಲ್ಲಿ ಮೊಬೈಲ್ನಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ. ಸದ್ಯ ಅಪ್ರಾಪ್ತ ವಿದ್ಯಾರ್ಥಿ ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
























`
