ನವದೆಹಲಿ: ಭಾರತೀಯ ರಾಷ್ಟ್ರೀಯ ಲೋಕದಳದ(INLD) ಹರಿಯಾಣ ರಾಜ್ಯ ಘಟಕದ ಮುಖ್ಯಸ್ಥ ನಫೆ ಸಿಂಗ್ ರಾಠಿ ಅವರನ್ನು ರಾಜ್ಯದ ಝಜ್ಜರ್ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮಾಜಿ ಶಾಸಕರಾಗಿರುವ ರಾಠಿ ಅವರು ಭಾನುವಾರ ಸಂಜೆ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಝಜ್ಜರ್ ಜಿಲ್ಲೆಯ ಬಹದ್ದೂರ್’ಘಡ ಪಟ್ಟಣದಲ್ಲಿ ದಾಳಿಕೋರರು ರಾಠಿ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಘಟನೆಯಲ್ಲಿ ರಾಠಿ ಅವರ ಸಹವರ್ತಿ ಕೂಡ ಸಾವನ್ನಪ್ಪಿದ್ದಾರೆ. ಮಾಜಿ ಶಾಸಕರ ಕುತ್ತಿಗೆ, ಸೊಂಟ ಮತ್ತು ತೊಡೆಯ ಭಾಗ ಸೇರಿದಂತೆ ಹಲವಾರು ಕಡೆ ಗುಂಡು ತಗುಲಿದೆ.
ದುಷ್ಕರ್ಮಿಗಳ ಬಂಧನಕ್ಕೆ ಎಸ್ ಟಿಎಫ್ ಮತ್ತು ಸಿಐಎ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಸ್ಪಿ ಅರ್ಪಿತ್ ಜೈನ್ ಹೇಳಿದ್ದಾರೆ
ರಾಠಿ ಅವರ ಜೀವಕ್ಕೆ ಬೆದರಿಕೆ ಇದ್ದರೂ ಅವರಿಗೆ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಐಎನ್ಎಲ್’ಡಿ ನಾಯಕ ಅಭಯ್ ಚೌಟಾಲಾ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ರಾಜ್ಯ ಗೃಹ ಸಚಿವ ಅನಿಲ್ ವಿಜ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ