ಕಾರ್ಕಳ: ಇನ್ನಾ ಗ್ರಾಮದಲ್ಲಿ ಹಾದು ಹೋಗುವ 440 ಕೆವಿ ವಿದ್ಯುತ್ ತಂತಿಯ ಟವರ್ ನಿರ್ಮಾಣ ಕಾಮಗಾರಿ ಬಗ್ಗೆ ಕಾಮಗಾರಿ ಆರಂಭ ಆದ ದಿನದಿಂದಲೇ ವಿರೋಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಆವತ್ತಿನಿಂದ ಈ ಯೋಜನೆಯ ವಿರುದ್ಧವಾಗಿ ಹೋರಾಟ ಸಮಿತಿಯ ಪಕ್ಷಾತೀತವಾಗಿ ಪ್ರತಿಭಟನೆ ಮಾಡುತ್ತಾ ಬಂದಿದೆ. ಈ ಹಿಂದೆ ಕಾಮಗಾರಿ ಆರಂಭಿಸುವ ಸಂದರ್ಭ ಸಮಿತಿಯು ರಾಜ್ಯ ರೈತ ಸಂಘ, ಕಿಸಾನ್ ಸಂಘ ಗಳ ಸಹಯೋಗದೊಂದಿಗೆ ತೀವ್ರವಾಗಿ ಪ್ರತಿಭಟನೆ ನಡೆಸಿದ್ದು ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಆಗಮಿಸಿ, ಮುಂದಿನ ದಿನಗಳಲ್ಲಿ ಸ್ಥಳೀಯ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಮೇಲೆ ಕಾಮಗಾರಿ ಆರಂಭಿಸುತ್ತೇವೆ, ರೈತರಿಗೆ ಮಾತಿತಿ ನೀಡದೇ ಯಾವುದೇ ಕಾಮಗಾರಿ ಆರಂಭಿಸುವುದಿಲ್ಲ ಎಂದು ಭರವಸೆಯ ಮೇರೆಗೆ ಅವರ ಮಾತಿಗೆ ಗೌರವ ಕೊಟ್ಟು ಅಂದಿನ ಪ್ರತಿಭಟನೆಯಿಂದ ನಾವು ಒಮ್ಮತದಿಂದ ಹಿಂದೆ ಸರಿದಿದ್ದೆವು. ಆದರೆ ಆ ಬಳಿಕ ಉಸ್ತುವಾರಿ ಸಚಿವರು ಈ ಬಗ್ಗೆ ಯಾವ ಕ್ರಮವೂ ಕೈಗೊಳ್ಳದೆ ನವೆಂವರ್ 30 ರಂದು ಕೆಡಿಪಿ ಸಭೆಗೆ ಆಗಮಿಸಿದ ಸಭೆ ನಡೆಸಿದ ಬಳಿಕ ಡಿಸೆಂಬರ್ 3 ರಂದು ಏಕಾಏಕಿ ಮತ್ತೆ ರೈತರ ಜಮೀನಿನಲ್ಲಿ ಬಲಾತ್ಕಾರಯುತವಾಗಿ ಟವರ್ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಹೋರಾಟ ಸಮಿತಿ ಸದಸ್ಯೆ ಮತ್ತು ಮಾಜಿ ಜಿ.ಪಂ ಸದಸ್ಯರಾದ ರೇಶ್ಮಾ ಉದಯ ಶೆಟ್ಟಿ ಹೇಳಿದ್ದಾರೆ.
ನಮ್ಮ ಹೋರಾಟವು ಪಕ್ಷಾತೀತವಾಗಿ ನಡೆಯುತ್ತಿದ್ದು ನಮ್ಮೊಂದಿಗೆ ಬಿಜೆಪಿ, ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲಾ ಪಕ್ಷದ ಕಾರ್ಯಕರ್ತರೂ, ನಾಯಕರು ಕೈಜೋಡಿಸಿದ್ದಾರೆ. ರೈತರ ವಿಚಾರ ಅಥವಾ ನಮ್ಮ ಗ್ರಾಮದ ಸಮಸ್ಯೆ ಬಂದಾಗ ನಾವು ಎಂದಿಗೂ ಕೂಡ ಪಕ್ಷಾತೀತವಾಗಿ ಹೋರಾಟ ಮಾಡಲು ಬದ್ಧರು. ಈ ಕಾರಣಕ್ಕಾಗಿ ನಾವು ಈ ಯೋಜನೆಯ ವಿರುದ್ಧ ಪಕ್ಷಬೇಧ ಮರೆತು ಹೋರಾಟಕ್ಕೆ ಇಳಿದಿದ್ದೇವೆ. ನಮ್ಮ ಹೋರಾಟಕ್ಕೆ ಶಾಸಕ ವಿ ಸುನಿಲ್ ಕುಮಾರ್ ರವರು ಕೂಡ ಸಂಪೂರ್ಣವಾಗಿ ಸಹಕಾರ ನೀಡುತ್ತಾ ಬಂದಿದ್ದಾರೆ. ಅಧಿಕಾರಾವಧಿಯಲ್ಲಿ ಹಲವು ಬಾರಿ ನಾವು ಅವರೊಂದಿಗೆ ಚರ್ಚಿಸಿದಾಗ ಈ ಯೋಜನೆಯನ್ನು ರೈತರ ಸಹಮತ ವಿಲ್ಲದೆ ಕಾರ್ಯಗತಗೊಳಿಸಬಾರದೆಂಬ ಸ್ಪಷ್ಟ ಆದೇಶವನ್ನೂ ಅಧಿಕಾರಿಗಳಿಗೆ ನೀಡಿರುತ್ತಾರೆ . ಡಿಸೆಂಬರ್ 3 ರಂದು ಹೋರಾಟದ ಸಂದರ್ಭ ಉಡುಪಿ-ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ದೆಹಲಿ ಸಂಸದ್ ಅಧಿವೇಶನದಲ್ಲಿದ್ದರೂ ಕೂಡ ನಮ್ಮ ಕರೆಗೆ ಸ್ಪಂದಿಸಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದಾರೆ.
ನಮ್ಮ ಪ್ರತಿಭಟನೆ ಸಂದರ್ಭ ಕಾರ್ಕಳ ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿಯವರೂ ಕೂಡ ಆಗಮಿಸಿರುವುದು ಸ್ವಾಗತಾರ್ಹವೇ. ಆದರೆ ಈ ಸಂದರ್ಭ ಅವರಿಂದ ಕೆಲ ರಾಜಕೀಯ ಪ್ರೇರಿತ ಮಾತುಗಳು ಬಂದಿರುವುದು ನಮಗೆ ಅತ್ಯಂತ ಬೇಸರ ತಂದಿದ್ದು, ಇಲ್ಲಿ ರಾಜಕೀಯ ಪ್ರದರ್ಶನವಾಗಿರುವುದನ್ನು ನಮ್ಮ ಹೋರಾಟ ಸಮಿತಿ ಅತ್ಯಂತ ಕಟುವಾಗಿ ಖಂಡಿಸುತ್ತದೆ. ದಯವಿಟ್ಟು ತಮ್ಮ ರಾಜಕೀಯ ಬೇಳೆ ಬೇಯಿಸುವುದಕ್ಕೋಸ್ಕರ ನಮ್ಮ ಹೋರಾಟದೊಂದಿಗೆ ಜೊತೆಯಾಗುವುದು ನಮ್ಮ ಹೋರಾಟ ಸಮಿತಿಗೆ ಅವಶ್ಯಕತೆ ಇರುವುದಿಲ್ಲ ನಾವು ಯಾವತ್ತೂ ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ. ರೈತರ ಧ್ವನಿಯಾಗಿ ಯಾವುದೇ ಸರ್ಕಾರದ ರೈತ ವಿರೋಧಿ ನೀತಿಯನ್ನು ಸದಾ ಖಂಡಿಸುತ್ತೇವೆ. ಕಾಂಗ್ರೆಸ್ ನಾಯಕರಿಗೆ ನಮ್ಮ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕೂಡಲೇ ತಮ್ಮ ಉಸ್ತುವಾರಿ ಸಚಿವರ ಭರವಸೆಯನ್ನು ಅವರಿಗೆ ನೆನಪಿಸಿ ಪರ್ಯಾಯ ಮಾರ್ಗ ದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಆದೇಶಿಸುವಂತೆ ಮಾಡಿ. ಅದನ್ನು ಬಿಟ್ಟು ನಿಮ್ಮದೇ ಸರಕಾರದ ಒತ್ತಡದಿಂದ ನಡೆಯುತ್ತಿರುವ ಈ ಕಾಮಗಾರಿಯ ಬಗ್ಗೆ ನೀವೇ ಪ್ರತಿಭಟನೆ ಗೆ ಮುಂದಾಗಿ ಜನರನ್ನು ಮೂರ್ಖರನ್ನಾಗಿಸುವ ವಿಫಲ ಯತ್ನ ಯಾಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ದಯವಿಟ್ಟು ನಿಮ್ಮ ರಾಜಕೀಯ ಲಾಭಕ್ಕೋಸ್ಕರ ನಮ್ಮ ನಮ್ಮೊಳಗೆ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಲು ಪ್ರಯತ್ನಿಸಬೇಡಿ. ಪಕ್ಷ ಭೇದ ಮರೆತು, ರಾಜಕೀಯ ಸಿದ್ಧಾಂತವನ್ನು ಬಿಟ್ಟು ಈ ಹೋರಾಟ ಮಾಡುತ್ತಿದ್ದೇವೆ. ನಮ್ಮ ಒಗ್ಗಟ್ಟಿನ ಈ ಹೋರಾಟದಲ್ಲಿ ಬಿರುಕು ಮೂಡಿಸಿ ದಯವಿಟ್ಟು ಹೋರಾಟದ ದಿಕ್ಕು ತಪ್ಪಿಸಬೇಡಿ. ಬಡ ರೈತರ ಬದುಕಿನ ಉಳಿವಿಗಾಗಿ ಒಂದು ಒಳ್ಳೆಯ ಉದ್ದೇಶದಿಂದ ಆರಂಭಿಸಿದ ಹೋರಾಟವನ್ನು ನಾಶಮಾಡಿದ ಅಪಕೀರ್ತಿಗೆ ಪಾತ್ರರಾಗಬೇಡಿ ಎಂದು ರೇಶ್ಮಾ ಉದಯ್ ಶೆಟ್ಟಿ ಪತ್ರಿಕಾ ಹೇಳೀಕೆಯಲ್ಲಿ ತಿಳಿಸಿದ್ದಾರೆ.