Share this news

ನವದೆಹಲಿ: ಜಗತ್ತಿನ ಅತ್ಯಂತ ನಟೋರಿಯಸ್ ಭಯೋತ್ಪಾದಕ ಸಂಘಟನೆಯೆಂಬ ಕುಖ್ಯಾತಿ ಪಡೆದಿರುವ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಸಂಘಟನೆ ಹುಟ್ಟಿಕೊಂಡು ಹತ್ತು ವರ್ಷಗಳು ತುಂಬಿದ್ದು, ಅದರ ಸಂಭ್ರಮಾಚರಣೆಗೆ ಜಗತ್ತಿನಾದ್ಯಂತ ಭೀಕರ ದಾಳಿ ನಡೆಸುವಂತೆ ಉಗ್ರ ಸಂಘಟನೆಯು ತನ್ನ ಸದಸ್ಯರಿಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಗುಪ್ತಚರ ಏಜೆನ್ಸಿಗಳು ಭದ್ರತಾಪಡೆಗಳು ಕಟ್ಟೆಚ್ಚರ ವಹಿಸಿವೆ.

ಇಡೀ ಜಗತ್ತನ್ನು ಇಸ್ಲಾಮಿಕ್‌ ಸಾಮ್ರಾಜ್ಯವಾದ ‘ಕ್ಯಾಲಿಫೇಟ್‌’ನ ಆಳ್ವಿಕೆಗೆ ತರುವಂತೆ 2014ರ ರಂಜಾನ್‌ನಂದು ಐಸಿಸ್‌ ಕರೆ ನೀಡಿತ್ತು. ಆ ಘೋಷಣೆಯೇ ಐಸಿಸ್‌ನ ಹುಟ್ಟು ಎಂದು ಹೇಳಲಾಗುತ್ತದೆ. ಮೂಲತಃ 1999ರಲ್ಲಿ ಜೋರ್ಡಾನ್‌ನ ಉಗ್ರ ಅಬು ಮುಸಬ್‌ ಅಲ್‌ ಜರ್ಕಾವಿ ಎಂಬಾತ ಈ ಸಂಘಟನೆಯನ್ನು ಹುಟ್ಟುಹಾಕಿದ್ದರೂ, 2014ರಲ್ಲಿ ಇದರ ಹೆಸರನ್ನು ಇಸ್ಲಾಮಿಕ್‌ ಸ್ಟೇಟ್‌ ಎಂದು ಸಂಘಟನೆ ಮುಖ್ಯಸ್ಥ ಅಬು ಬಕರ್ ಅಲ್‌ ಬಗ್ದಾದಿ ಬದಲಿಸಿ, ‘ಕ್ಯಾಲಿಫೇಟ್‌’ ಸ್ಥಾಪಿಸಿರುವುದಾಗಿ ಘೋಷಿಸಿದ್ದ. ಅಂದಿನಿಂದ ಇದು ಐಸಿಸ್‌ ಎಂದು ಕುಖ್ಯಾತಿ ಪಡೆದಿದೆ. ಜಗತ್ತಿನಾದ್ಯಂತ ಇರುವ ಐಸಿಸ್‌ ಮಾಡ್ಯೂಲ್‌ಗಳ ‘ಒಂಟಿ ತೋಳಗಳು’ ನಾಸ್ತಿಕರ ಮಾರಣಹೋಮ ನಡೆಸಬೇಕು. ಎಲ್ಲಾ ಮುಹಾಜಿರಿನ್‌ಗಳು (ವಿದೇಶಗಳಲ್ಲಿರುವ ಹೋರಾಟಗಾರರು) ಇದಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡುವ ಆಡಿಯೋವನ್ನು ಐಸಿಸ್‌ ವಕ್ತಾರ ಅಬು ಹುದಾಯ್‌ಫಾ ಅಲ್‌ ಅನ್ಸಾರಿ ಬಿಡುಗಡೆ ಮಾಡಿದ್ದಾನೆ. 41 ನಿಮಿಷದ ಈ ಆಡಿಯೋದಲ್ಲಿ ಹೇಗೆ ಕ್ಯಾಲಿಫೇಟ್‌ನ ಸ್ಥಾಪನೆಯು ಜಗತ್ತಿನ ಇತಿಹಾಸದಲ್ಲಿ ದೊಡ್ಡ ತಿರುವಾಗಿದ್ದು, ಹೇಗೆ ಈಗ ಅದು ಆಫ್ರಿಕಾದ ಮೊಜಾಂಬಿಕ್‌ವರೆಗೂ ಜಗತ್ತಿನಾದ್ಯಂತ ವಿಸ್ತರಿಸಿಕೊಂಡಿದೆ ಎಂಬುದನ್ನು ಹೇಳಿದ್ದಾನೆ.

ಐಸಿಸ್‌ ಸೇರಲು ಮುಸ್ಲಿಮರಿಗೆ ಕರೆ:
ಇದೇ ವೇಳೆ ಆಡಿಯೋದಲ್ಲಿ ಆತ ಇತ್ತೀಚೆಗೆ ರಷ್ಯಾದ ಮಾಸ್ಕೋದಲ್ಲಿ ನೂರಾರು ಜನರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯನ್ನು ಶ್ಲಾಘಿಸಿದ್ದಾನೆ. ಅಲ್ಲದೇ ಜಗತ್ತಿನ ಎಲ್ಲೆಡೆ ಇರುವ ಮುಸ್ಲಿಮರು ಇಸ್ಲಾಮಿಕ್‌ ಸ್ಟೇಟ್‌ ಗೆ ಸೇರ್ಪಡೆಯಾಗಬೇಕು ಎಂದೂ ಕರೆ ನೀಡಿದ್ದಾನೆ. ‘ಪ್ರವಾದಿ ಹೇಳಿದಂತೆ ಕ್ರಮೇಣ ಜಗತ್ತಿನಲ್ಲಿ ಇಸ್ಲಾಂ ಒಂದೇ ಉಳಿಯಲಿದೆ’ ಎಂದೂ ಹೇಳಿದ್ದಾನೆ. ಈ ಆಡಿಯೋಕ್ಕೆ ‘ಅಲ್ಲಾಹುನಿಂದಾಗಿ ಇದು ಸಾಧ್ಯವಾಗಲಿದೆ’ ಎಂದು ಶೀರ್ಷಿಕೆ ನೀಡಲಾಗಿದೆ. ಇದೇ ಆಡಿಯೋದಲ್ಲಿ ಅಲ್‌ ಖೈದಾ ಸಂಘಟನೆಯು ದಾರಿ ತಪ್ಪಿದೆ ಎಂದು ದೂಷಣೆ ಮಾಡಲಾಗಿದೆ. ಕಳೆದ ಜನವರಿ ತಿಂಗಳಲ್ಲೂ ಅನ್ಸಾರಿ ಒಂದು ಆಡಿಯೋ ಬಿಡುಗಡೆ ಮಾಡಿ ಯಹೂದಿಗಳ ಮಾರಣಹೋಮಕ್ಕೆ ಕರೆ ನೀಡಿದ್ದ.

 

 

Leave a Reply

Your email address will not be published. Required fields are marked *