ಕಾರ್ಕಳ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಗೊಂಡ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಹಾಗೂ ನೈಋತ್ಯ ಪದವೀಧರ ಕ್ಷೇತ್ರದ ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡ ಡಾ.ಧನಂಜಯ ಸರ್ಜಿ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದ ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡ ಎಸ್.ಎಲ್.ಭೋಜೇಗೌಡ ರವರಿಗೆ ಭಾರತೀಯ ಜನತಾ ಪಾರ್ಟಿ ಕಾರ್ಕಳ ಇದರ ವತಿಯಿಂದ ಅಭಿನಂದನಾ ಸಮಾರಂಭ ಜೂ.16 ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಾರ್ಕಳ ಶ್ರೀ ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯು ದೇಶದ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಕೇಂದ್ರದಲ್ಲಿ ಎನ್.ಡಿ.ಎ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ . ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಅದ್ಭುತ ಗೆಲುವು ಸಾಧಿಸಿದ್ದು, ಈ ಗೆಲುವಿಗೆ ಹಗಲಿರುಳು ದುಡಿದ ಕಾರ್ಯಕರ್ತರು ಹಾಗೂ ಮತನೀಡಿ ಸಹಕರಿಸಿದ ಮತದಾರರನ್ನು ಚುನಾಯಿತಗೊಂಡ ನೂತನ ಸಂಸದರನ್ನು ಅಭಿನಂದಿಸುವ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಕಳ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿರುವರು ಎಂದು ನವೀನ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.