ಕಡಬ : ದೈವದ ಹರಕೆಗಾಗಿ ಕೋಳಿಯೊಂದನ್ನು ಕೋಡಿಂಬಾಳದಲ್ಲಿ ಖರೀದಿಸಿ ಎಡಮಂಗಲಕ್ಕೆ ಸ್ಕೂಟರ್‌ನಲ್ಲಿ ಸಂಚರಿಸುತ್ತಿರುವಾಗ ಸ್ಕೂಟರ್ ಮೇಲೆಯೇ ಮರಬಿದ್ದು ಸವಾರ ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮರವರು ಮೃತಪಟ್ಟು 3 ದಿನ ಕಳೆದಿದೆ.
ಘಟನೆ ನಡೆದ ಸಂದರ್ಭ ಸೀತಾರಾಮ ಅವರೊಂದಿಗಿದ್ದ ಕೋಳಿ ಮಾತ್ರ ಈಗಲೂ ಅದೇ ಸ್ಥಳದಲ್ಲಿದ್ದು, ಈ ದುರ್ಘಟನೆಗೆ ಸಾಕ್ಷಿಯೆಂಬಂತಿದೆ.
ಸೀತಾರಾಮ ಅವರ ಎಡಮಂಗಲದ ಕುಟುಂಬದ ಮನೆಯಲ್ಲಿ ದೈವದ ಅಗೇಲು ಸೇವೆಯಿತ್ತು. ಅದಕ್ಕಾಗಿ ಅವರು ಕೋಳಿ ಖರೀದಿಸಿ ಅವರು ಕೊಂಡೊಯ್ಯುತ್ತಿದ್ದರು. ಸ್ಕೂಟರ್ ಪುಳಿಕುಕ್ಕು ಎಂಬಲ್ಲಿಗೆ ಬರುತ್ತಿದ್ದಾಗ ಸಂಚಾರದಲ್ಲಿದ್ದ ಸ್ಕೂಟರ್ ಮೇಲೆಯೇ ದೂಪದ ಮರವೊಂದು ಬುಡ ಸಹಿತ ಉರುಳಿ ಬಿದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸೀತಾರಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಘಟನೆ ನಡೆದು ಮೂರುದಿನಗಳಾಗಿದ್ದು, ಮೃತದೇಹದ ಅಂತ್ಯಸಂಸ್ಕಾರವೂ ನಡೆದಿದೆ. ಆದರೆ ಹರಕೆಗಾಗಿ ಸೀತಾರಾಮ ಅವರು ಕೊಂಡೊಯ್ಯುತ್ತಿದ್ದ ಕೋಳಿ ಈ ದಾರುಣ ಘಟನೆ ನಡೆದ ಸ್ಥಳದಲ್ಲಿಯೇ ಘಟನೆಗೆ ಸಾಕ್ಷಿಯೆಂಬಂತೆ ಸೀತಾರಾಮ ಅವರ ಸ್ಕೂಟರ್ ಮತ್ತು ಮರದ ಗೆಲ್ಲೊಂದರಲ್ಲಿ ಕುಳಿತು ಮೂಕರೋಧನೆಗೈಯುತ್ತಿದೆ.
ಘಟನೆಗೆ ಸಾಕ್ಷಿಯಾಗಿ ಸುಜ್ಜುಗುಜ್ಜಾಗಿರುವ ಸ್ಕೂಟರ್ ಈಗಲೂ ಸ್ಥಳದಲ್ಲಿದೆ. ಸೀತಾರಾಮ ಅವರ ಮನೆ ಮಂದಿ ಕೋಳಿ ಮತ್ತು ಸ್ಕೂಟರ್ ಅನ್ನು ಮನೆಗೊಯ್ಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಹರಕೆ ಹೆಸರಿನಲ್ಲಿ ಬಲಿಯಾಗಬೇಕಿದ್ದ ಕೋಳಿ ಘಟನೆಯಲ್ಲಿ ಜೀವಂತವಾಗಿ ಪಾರಾಗಿದೆ. ತನ್ನದಲ್ಲದ ತಪ್ಪಿಗೆ ಮನೆಗೆ ಕೊಂಡೊಯ್ಯುವವರಿಲ್ಲದೆ ಮರದ ಕೊಂಬೆಯಲ್ಲಿ, ಮತ್ತು ಮೃತ ಸೀತಾರಾಮ ಅವರ ಸ್ಕೂಟರ್ ಮೇಲೆ ಕುಳಿತು ಕಾಲಕಳೆಯುತ್ತಿದೆ.