ಬಂಟ್ವಾಳ : ಫರಂಗಿಪೇಟೆ ಸಮೀಪದ ಸುಜೀರು ಎಂಬಲ್ಲಿರುವ ಶ್ರೀ ದೇವಕಿಕೃಷ್ಣ ರವಳನಾಥ ಮಂದಿರದಲ್ಲಿ ಸೋಮವಾರ ಮುಂಜಾನೆ ಸುಮಾರು 4 ಗಂಟೆಗೆ ನುಗ್ಗಿದ ಕಳ್ಳರು ಅಂದಾಜು 2.30 ಲಕ್ಷದ ಮೌಲ್ಯದ ನಗನಗದುಗಳನ್ನು ಎಗರಿಸಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇವಳಕ್ಕೆ ಸಂಬಂಧಿಸಿದಂತೆ ಅನಾಧಿಕಾಲದ ನೂರಾರು ವರ್ಷಗಳ ಹಳೆಯದಾದ ಸುಮಾರು ಒಂದುವರೆ ಕೆ.ಜಿ.ತೂಕದ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ದೇವರ ಮೂಗುತಿ ದೇವರ ಕೊಡೆ ಸೇರಿದಂತೆ ಒಟ್ಟು 2 ಕೆ.ಜಿ.ಯಷ್ಟು ಬೆಳ್ಳಿ ಹಾಗೂ 3 ಪವನ್ ಚಿನ್ನ , ಇದರ ಜೊತೆಗೆ ಕಾಣಿಕೆ ಹುಂಡಿಯಲ್ಲಿರುವ ನಗದನ್ನು ದೋಚಿದ್ದಾರೆ.
ಆದಿತ್ಯವಾರ ಮಂದಿರದಲ್ಲಿ ವಿಶೇಷವಾದ ಪೂಜಾ ಕಾರ್ಯಕ್ರಮವಿದ್ದ ಕಾರಣ ಕಾಣಿಕೆ ಹುಂಡಿಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಹಣವಿರಬಹುದು ಎಂದು ಹೇಳಲಾಗುತ್ತಿದೆ.
ಸುಮಾರು 5 ಜನರ ತಂಡ ಈ ಕಳ್ಳತನದಲ್ಲಿ ಭಾಗಿಯಾಗಿರುವುದು ಹಾಗೂ ವಾಹನದ ಮೂಲಕ ಬಂದ ಕಳ್ಳರ ತಂಡ ಸುಮಾರು 3.30 ರ ಸಮಯದಲ್ಲಿ ದೇವಸ್ಥಾನದ ಹಿಂಬದಿಯ ಬಾಗಿಲಿನ ಚಿಲಕ ಮುರಿದು ಒಳಪ್ರವೇಶ ಮಾಡಿದ್ದಾರೆ. ಬಳಿಕ ದೇವಸ್ಥಾನದ ಸುತ್ತಲೂ ತಿರುಗಾಡಿ ಗರ್ಭಗುಡಿಯ ಒಳಗೆ ಪ್ರವೇಶ ಮಾಡುತ್ತಾರೆ. ಅಲ್ಲಿ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ವಸ್ತುಗಳನ್ನು ಗೋಣಿಯಲ್ಲಿ ತುಂಬಿಸಿಕೊಂಡು ದೇವಳದ ಗೋಪುರಕ್ಕೆ ಬರುತ್ತಾರೆ. ಗೋಪುರದಲ್ಲಿ ಕಳ್ಳತನ ಮಾಡಿದ ಎಲ್ಲಾ ಬೆಳೆಬಾಳುವ ವಸ್ತುಗಳನ್ನು ಒಂದೇ ಚೀಲದಲ್ಲಿ ಭದ್ರಗೊಳಿಸಿ ಸುಮಾರು 4 ಗಂಟೆ ಅಂದಾಜಿಗೆ ದೇವಸ್ಥಾನದಿಂದ ವಾಪಸು ಹೋಗುವ ದೃಶ್ಯ ಸಿ.ಸಿ.ಕ್ಯಾಮರಾ ಮೂಲಕ ಕಂಡು ಬಂದಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಲಾಗಿದ್ದು , ಘಟನಾ ಸ್ಥಳಕ್ಕೆ ಬಂಟ್ವಾಳ ಪೋಲೀಸ್ ನಿರೀಕ್ಷಕ ಶಿವಕುಮಾರ್, ಠಾಣಾಧಿಕಾರಿ ಗಳಾದ ಹರೀಶ್ ಮತ್ತು ಮೂರ್ತಿ ಬೇಟಿ ನೀಡಿದ್ದಾರೆ. ಜೊತೆಗೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.