ಕಾರ್ಕಳ: ಮೀಸಲು ಅರಣ್ಯ ಪ್ರದೇಶದಲ್ಲಿ ಮರ ಕಡಿದು ಮಾರಾಟ ಮಾಡಿದ್ದಾರೆಂದು ಆರೋಪಿಸಿ ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬ ಅರಣ್ಯಾಧಿಕಾರಿಗೆ ದೂರು ನೀಡಿದ್ದು, ಮರ ಕಡಿದ ವ್ಯಕ್ತಿ ದೂರುದಾರನಿಗೆ ಜೀವ ಬೆದರಿಕೆಯೊಡ್ಡಿರುವ ಘಟನೆ ಫೆ.11 ರಂದು ನಡೆದಿದೆ.
ಕೃಷ್ಣ ಎಂಬವರು ಕಸಬಾ ಗ್ರಾಮದ ಜೋಗುಳಬೆಟ್ಟು ಎಂಬಲ್ಲಿ ಮೀಸಲು ಅರಣ್ಯ ಪ್ರದೇಶದ ಸ.ನಂ 354 ರಲ್ಲಿ ಜೆಸಿಬಿ ತಂದು ಅಗೆದು ಸಮತಟ್ಟು ಮಾಡಿ ಅದರಲ್ಲಿರುವ ಮರಗಳನ್ನು ಕಡಿದು ಮಾರಾಟ ಮಾಡಿದ್ದಾರೆಂದು ಮಿಯ್ಯಾರು ಗ್ರಾಮದ ಪ್ರಶಾಂತ್ ಎಂಬವರು ಫೆ.11 ರಂದು ಅರಣ್ಯಾಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದ್ದರು. ಅದೇ ದಿನ ರಾತ್ರಿ ಪ್ರಶಾಂತ್ ಅವರು ಜೋಗುಳಬೆಟ್ಟು ಮೈದಾನದ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಬೈಕಿನಲ್ಲಿ ಬಂದ ಕೃಷ್ಣ ಅರಣ್ಯಾಧಿಕಾರಿಗೆ ಬಾರಿ ದೂರು ಕೊಡುತ್ತಿಯಾ, ಎಂದು ಅವಾಚ್ಯ ಶಬ್ದಗಳಿಂದ ಬೈದು, ಜಾತಿನಿಂದನೆ ಮಾಡಿ, ಮೈದಾನಕ್ಕೆ ಬಂದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಂದು ಪ್ರಶಾಂತ್ ದೂರು ನೀಡಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.