ಕಾರ್ಕಳ:ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮಂಡಿಸಿರುವ ಕಾಂತರಾಜು ವರದಿ ಪ್ರಜಾತಂತ್ರ ವ್ಯವಸ್ಥೆಯಡಿಯ ವಂಚಿತವರ್ಗಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಗುರಿ ಹೊಂದಿದೆಯೇ ಹೊರತು, ಸಮಾಜದ ಯಾವುದೇ ಜಾತಿ ಅಥವಾ ವರ್ಗವನ್ನು ಅವಗಣಿಸುವ ಅಸಾಂವಿಧಾನಿಕ ನಿಲುವನ್ನು ಹೊಂದಿಲ್ಲವೆಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಕಾರ್ಕಳ ವಿಧಾನ ಸಭಾ ವ್ಯಾಪ್ತಿಯ ಪತ್ತೊಂಜಿ ಕಟ್ಟೆಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಯೋಜಿಸಿರುವ ಕಾರ್ಯಕರ್ತರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದುಳಿದ ವರ್ಗಗಳ ಸಬಲೀಕರಣದ ಗುರಿಯೊಂದಿಗೆ ನಡೆದ ಈ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಹಿನ್ನೆಲೆಯ ಜಾತಿಗಣತಿ ಕೆಲವೊಂದು ಅಸ್ತಿತ್ವವೇ ಇಲ್ಲದಿದ್ದ ವರ್ಗಕ್ಕೆ ಅಸ್ತಿತ್ವವನ್ನು ನೀಡುವ, ಧ್ವನಿ ಇಲ್ಲದ ವರ್ಗಕ್ಕೆ ಶಕ್ತಿ ನೀಡುವಲ್ಲಿ ಯಶಸ್ವಿಯಾಗಲಿದೆ,ಇದರಿಂದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಗುರಿಸಾಧಿಸುವುದರೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನಮ್ಮ ಸರಕಾರದಿಂದ ಮುಂದಿನ ದಿನಗಳಲ್ಲಿ ವರದಿಯ ಪೂರ್ಣ ಅನುಷ್ಠಾನ ನಡೆಯಲಿದೆ ಎಂದರು.
ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಮಾತಾಡಿ ನಮ್ಮ ಸರಕಾರ ನೀಡಿರುವ ಐದು ಗ್ಯಾರಂಟಿಗಳು ಸಮಾಜದ ಬಡವರ್ಗಕ್ಕೆ ಆರ್ಥಿಕ ಶಕ್ತಿಯನ್ನು ನೀಡಿದೆ. ಆರ್ಥಿಕತೆ ನಿಂತ ನೀರಲ್ಲ. ಈ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಹಣದ ಹರಿವು ದ್ವಿಗುಣಗೊಂಡಿದೆ. ಪಂಚ ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗಲಿದೆ ಎಂದ ಬಿಜೆಪಿ ಈಗ ಹತಾಶಗೊಂಡಿದೆ. ಗ್ಯಾರಂಟಿಗಳ ಶಾಶ್ವತ ಅನುಷ್ಠಾನಕ್ಕಾಗಿ ಲೋಕಸಭಾ ಚುನಾವಣೆಯ ನಾವು ಗೆಲ್ಲಬೇಕಿದೆ. ನಮ್ಮ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸದಾ ಜನಸಾಮಾನ್ಯರ ಜತೆ ಗುರುತಿಸಿಕೊಂಡಿದ್ದು ಅವರ ಗೆಲುವು ಜನಸಾಮಾನ್ಯನ ಗೆಲುವಾಗಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಮಾತನಾಡಿ ಎಸ್’ಬಿಐ ಸುಪ್ರಿಂ ಕೋರ್ಟಿನ ಮುಂದಿಟ್ಟಿರುವ ಚುನಾವಣಾ ಬಾಂಡುಗಳ ವಿವರಗಳು ಬಿಜೆಪಿಯ ಅಧಿಕಾರ ದಾಹದ ಕರಾಳ ಮುಖವನ್ನು ಬಯಲು ಮಾಡಿದೆ. ಆ ಮೂಲಕ ಅದು ಒಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಧಿಕಾರ ನಡೆಸುವ ಮತ್ತು ಚುನಾವಣೆಗೆ ಸ್ಫರ್ದಿಸುವ ನೈತಿಕ ಹಕ್ಕನ್ನು ಕಳಕೊಂಡಿದೆ ಎಂದರು. ಕೇಂದ್ರದಲ್ಲಿ ಸ್ವಚ್ಛ ದಿಟ್ಟ ಜನಾಡಳಿತಕ್ಕಾಗಿ ಕಾಂಗ್ರೆಸ್ ಪಕ್ಷದ ಆಡಳಿತ ಅನಿವಾರ್ಯ ಎಂದರು.
ನಿವೃತ್ತ ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಮಾಜಿ ಪುರಸಭಾಧ್ಯಕ್ಷ ಸುಭೀತ್ ಕುಮಾರ್ ಸೇರಿದಂತೆ ಪುರಸಭಾ ಸದಸ್ಯರು, ಮಾಜಿ ಸದಸ್ಯರು,ವಿವಿಧ ಘಟಕಗಳ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ವಕ್ತಾರ ಫುರಸಭಾ ಸದಸ್ಯ ಶುಭದ ರಾವ್ ಸ್ವಾಗತಿಸಿ ಪ್ರಸ್ತಾವನೆಗೈದು ವಂದಿಸಿದರು