ಕಾರ್ಕಳ: ಬಿಜೆಪಿ ಮುಖಂಡನ ನೇತೃತ್ವದಲ್ಲೇ ಶಾಲೆಯಲ್ಲಿ ಈದ್ ಮಿಲಾದ್ ಆಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿರುವ ಆರೋಪ ಕೇಳಿಬಂದಿದ್ದು, ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈದ್ ಮಿಲಾದ್ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದು,ಹಿಂದೂ ವಿದ್ಯಾರ್ಥಿಗಳಿಗೆ ಮುಸ್ಲಿಮರ ಸಾಂಪ್ರದಾಯಿಕ ದಿರಿಸು ತೊಡಿಸಿ ನಡಸಿದ ನೃತ್ಯ ರೂಪಕ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಘಟನೆ ನಡೆದ ಶಾಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡ ಸತ್ಯಶಂಕರ ಶೆಟ್ಟಿ ಎಂಬವರು ಶಾಲಾ ಸಂಚಾಲಕರಾಗಿದ್ದು, ಅವರ ನೇತೃತ್ವದಲ್ಲೇ ಈ ಕಾರ್ಯಕ್ರಮ ನಡೆದಿದೆ ಎನ್ನಲಾಗಿದ್ದು, ಅವರು ಕಾರ್ಯಕ್ರಮದ ವೇದಿಕೆಯಲ್ಲಿ ಭಾಗವಹಿಸಿರುವುದು ಕೂಡ ಹಿಂದೂ ಸಂಘಟನೆಗಳ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಹಿಂದೂ ಮಕ್ಕಳನ್ನು ಬಲವಂತವಾಗಿ ಮುಂದುಗಡೆ ಕೂರಿಸಲಾಗಿದೆ ಎಂದು ಮಕ್ಕಳ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂತಹ ಘಟನೆ ನಡೆದಿರುವುದು ಖಂಡನೀಯ: ಮಹೇಶ್ ಬೈಲೂರು
ಸಚ್ಚರಿಪೇಟೆಯ ಶಾಲೆಯಲ್ಲಿ ಇಂತಹ ಘಟನೆ ನಡೆದಿರುವುದು ಖಂಡನೀಯ.ಅವರ ಕಾರ್ಯಕ್ರಮದಲ್ಲಿ ನಮ್ಮ ಮಕ್ಕಳಿಗೆ ದಿರಿಸು ತೊಡಿಸಿ ಕಾರ್ಯಕ್ರಮ ಮಾಡಿರುವ ಬಿಜೆಪಿ ಮುಖಂಡನ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆ ಮುಖಂಡ ಮಹೇಶ್ ಬೈಲೂರು ಒತ್ತಾಯಿಸಿದ್ದಾರೆ.
ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್, ಹಿಂದೂ ಮಕ್ಕಳನ್ನು ಬೇರೆ ಧರ್ಮದ ಅನುಯಾಯಿಗಳಾಗುವಂತೆ ಪ್ರೇರೇಪಿಸಿದಂತಾಗುತ್ತದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಹಾಗೂ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಕಾರ್ಯಕ್ರಮ ಆಯೋಜಕರ ಹಾಗೂ ಶಾಲೆಯ ಮೇಲೆ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಮುಂದೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
in